ದೇಶ

ನಂದಮೂರಿ ಹರಿಕೃಷ್ಣ ಮೃತದೇಹ ಪಕ್ಕ ನಿಂತು ಸೆಲ್ಫಿ; ದಾದಿಯರನ್ನು ಕೆಲಸದಿಂದ ತೆಗೆದುಹಾಕಿದ ಆಸ್ಪತ್ರೆ

Sumana Upadhyaya

ಹೈದರಾಬಾದ್ : ನಟ ಹಾಗೂ ತೆಲುಗು ದೇಶಂ ಪಕ್ಷದ ಮಾಜಿ ಸಂಸದ ನಂದಮೂರಿ ಹರಿಕೃಷ್ಣ ಅವರ ಮೃತದೇಹದ ಜೊತೆ ಆಸ್ಪತ್ರೆಯಲ್ಲಿ ಸೆಲ್ಫಿ ತೆಗೆದುಕೊಂಡ ನಾಲ್ವರು ದಾದಿಯರನ್ನು ತೆಲಂಗಾಣ ಆಸ್ಪತ್ರೆ ಸೇವೆಯಿಂದ ತೆಗೆದುಹಾಕಿದೆ.

ನಂದಮೂರಿ ಹರಿಕೃಷ್ಣ ಅವರು ಕಳೆದ ಬುಧವಾರ ಅಲ್ಲೆಪರ್ತಿ ಗ್ರಾಮದ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸಿದ್ಧ ನಟ ಎನ್ ಟಿ ರಾಮರಾವ್ ಅವರ ಹಿರಿಯ ಪುತ್ರರಾಗಿರುವ ನಂದಮೂರಿ ಹರಿಕೃಷ್ಣ ಅವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ತಕ್ಷಣವೇ ಅವರನ್ನು ನಲ್ಗೊಂದಾ ಜಿಲ್ಲೆಯ ನರ್ಕೇತ್ ಪಲ್ಲಿಯ ಕಾಮಿನೇನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಪುರುಷ ಸಿಬ್ಬಂದಿ ಸೇರಿದಂತೆ ನಾಲ್ವರು ದಾದಿಯರು ಹರಿಕೃಷ್ಣ ಅವರ ಮೃತದೇಹದ ಮುಂದೆ ಸೆಲ್ಫಿ ತೆಗೆದುಕೊಂಡಿದ್ದರು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಸೆಲ್ಫಿ ತೆಗೆದುಕೊಂಡು ಅಸಮರ್ಪಕ ನಡವಳಿಕೆ ತೋರಿಸಿದ್ದಕ್ಕಾಗಿ ಆಸ್ಪತ್ರೆ ಆಡಳಿತ ವರ್ಗ ಸೇವೆಯಿಂದ ತೆಗೆದುಹಾಕಿದೆ.
ದಾದಿಯರು ಮುಖದಲ್ಲಿ ನಗು ತೋರಿಸುತ್ತಾ ಸೆಲ್ಫಿ ತೆಗೆದುಕೊಂಡು ನಂತರ ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದರು.

ಸೆಲ್ಫಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಾದ್ಯಂತ ವೈರಲ್ ಆಗಿತ್ತು. ಇದೊಂದು ಅಸೂಕ್ಷ್ಮ ಮತ್ತು ಅಮಾನವೀಯ ಕೃತ್ಯ ಎಂದು ನೋಡಿದವರೆಲ್ಲಾ ಬೈಯುತ್ತಿದ್ದರು. ಈ ವಿಷಯ ಆಸ್ಪತ್ರೆ ಅಧಿಕಾರಿಗಳಿಗೆ ಗೊತ್ತಾದಾಗ ತಕ್ಷಣವೇ ನಾಲ್ವರು ದಾದಿಯರನ್ನು ಸೇವೆಯಿಂದ ತೆಗೆದುಹಾಕಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸುವಾಗ ದಾದಿಯರು ಸೆಲ್ಫಿ ತೆಗೆದುಕೊಂಡಿದ್ದರು. ಇದೊಂದು ದುರದೃಷ್ಟಕರ ಘಟನೆ, ನಮ್ಮ ಸಿಬ್ಬಂದಿ ತೋರಿಸಿದ ಅಮಾನವೀಯ ವರ್ತನೆಗೆ ನಮ್ಮ ವಿಷಾದವಿದೆ. ನಮ್ಮ ಗಮನಕ್ಕೆ ಬಂದ ಕೂಡಲೇ ಅವರನ್ನು ಸೇವೆಯಿಂದ ತೆಗೆದುಹಾಕಿದ್ದೇವೆ ಎಂದು ಆಸ್ಪತ್ರೆಯ ಅಧಿಕೃತ ವಕ್ತಾರ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ.

SCROLL FOR NEXT