ದೇಶ

ಶಿಸ್ತು ಕಾಪಾಡಿ ಎಂದರೆ 'ಸರ್ವಾಧಿಕಾರಿ' ಹಣೆಪಟ್ಟಿ ಕಟ್ಟುತ್ತಾರೆ: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಿಸ್ತು ಕಾಪಾಡಿಕೊಳ್ಳಿ ಎಂದು ಹೇಳುವುದೇ ತಪ್ಪು ಎನ್ನುವಂತಾಗಿದ್ದು, ಶಿಸ್ತಿನಿಂದ ವರ್ತಿಸಿ ಎನ್ನುವವರಿಗೆ ಸರ್ವಾಧಿಕಾರಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಬರೆದಿರುವ 'ಮೂವಿಂಗ್ ಆನ್...ಮೂವಿನ್ ಫಾರ್ವರ್ಡ್: ಎ ಇಯರ್ ಇನ್ ಆಫಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ರಾಜ್ಯಸಭೆಯಲ್ಲಿ ಶಿಸ್ತು ಕಾಪಾಡಲು ಶ್ರಮಿಸಿದ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಶ್ಲಾಘಿಸಿದರು.
ವೆಂಕಯ್ಯ ನಾಯ್ಡು ಅವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅವರು ದೂರದರ್ಶಿತ್ವದ ನಾಯಕತ್ವ ವಹಿಸುತ್ತಾರೆ. ವೆಂಕಯ್ಯಜೀ ಒಬ್ಬ ಶಿಸ್ತಿನ ವ್ಯಕ್ತಿ. ಆದರೆ ದೇಶದಲ್ಲಿ ಸದ್ಯ ನೆಲೆಸಿರುವ ಪರಿಸ್ಥಿತಿಯಲ್ಲಿ ಶಿಸ್ತನ್ನು ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಎಂದು ಕರೆಯುವ ಪರಿಪಾಠ ಬೆಳೆದಿದೆ ಎಂದರು.
ಶಿಸ್ತನ್ನು ಕಾಪಾಡಲು ಯಾರಾದರೂ ಮುಂದಾದರೆ ಅವರನ್ನು ಸರ್ವಾಧಿಕಾರಿ ಎಂದು ಕರೆಯಲಾಗುತ್ತದೆ. ಆದರೆ ಬೇರೆಯವರಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಲು ಹೇಳುವ ಮುನ್ನ ಖುದ್ದು ವೆಂಕಯ್ಯ ಅದನ್ನು ಪಾಲಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವೆಂಕಯ್ಯ ನಾಯ್ಡು ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ವಿದ್ಯಾರ್ಥಿ ರಾಜಕಾರಣದಲ್ಲಿ 10 ವರ್ಷ ಹಾಗು ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯದಲ್ಲಿ 40 ವರ್ಷ ಸವೆಸಿದ್ದಾರೆ ಎಂದು ಮೋದಿ ವೆಂಕಯ್ಯ ನಾಯ್ಡು ಅವರ ರಾಜಕೀಯ ಜೀವನವನ್ನು ಸ್ಮರಿಸಿದರು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ವೆಂಕಯ್ಯ ನಾಯ್ಡು ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರು. ನಾಯ್ಡು ಅವರೂ ಕೂಡ ಗ್ರಾಮೀಣ ಅಭಿವೃದ್ಧಿ ಸಚಿವರಾಗಲು ಬಯಸಿದ್ದರು. ನಾಯ್ಡು ಅವರು ರೈತರ ಹೃದಯದಲ್ಲಿದ್ದಾರೆ. ರೈತರು ಹಾಗೂ ಕೃಷಿ ಕಲ್ಯಾಣಕ್ಕೆ ನಾಯ್ಡು ಅವರು ಬದ್ಧರಾಗಿದ್ದಾರೆಂದು ಪ್ರಧಾನಿ ಹೇಳಿದ್ದಾರೆ. 
ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿಗಳಾಗಿ ಬಂದಿದ್ದು, ಅವರ ರಾಜಕೀಯ ಹಾಗೂ ಆಡಳಿತಾತ್ಮಕತೆಯ ಅನುಭವ ಉಪ ರಾಷ್ಟ್ರಪತಿಗಳ ಕಚೇರಿ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 
SCROLL FOR NEXT