ದೇಶ

'ಇಲಿಗಳ ಕೊಲ್ಲೋಕೆ ಬುಲೆಟ್ ಏಕೆ ಬೇಕಿತ್ತು?'; ವಿಚಾರವಾದಿಗಳ ಬಂಧನ ಕುರಿತು ಪ್ರಕಾಶ್ ಅಂಬೇಡ್ಕರ್ ಹೇಳಿಕೆ

Srinivasamurthy VN
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ವಿಚಾರವಾದಿಗಳ ಬಂಧನ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಅಂಬೇಡ್ಕರ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಎಡಪಂಥೀಯ ವಿಚಾರವಾದಿಗಳನ್ನು ಪೊಲೀಸರು ಬಂಧಿಸಿರುವ ವಿಚಾರ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಹೇಳಿಕೆ ನೀಡಿ ಅಚ್ಚರಿಗೆ ಕಾರಣವಾಗಿದ್ದಾರೆ. ವಿಚಾರವಾದಿಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು 'ಇಲಿಗಳ ಕೊಲ್ಲೋಕೆ ಪೊಲೀಸರು ಏಕೆ ಬುಲೆಟ್ ಉಪಯೋಗಿಸುತ್ತಿದ್ದಾರೆ ತಿಳಿಯುತ್ತಿಲ್ಲ. ಇಲಿಗಳ ಕೊಲ್ಲೋಕೆ ಟಿಕ್20 ಸಾಕಿತ್ತು' ಎಂದು ಹೇಳಿದ್ದಾರೆ.
ಅಂತೆಯೇ ವಿಚಾರವಾದಿಗಳ ಬಂಧನಕ್ಕೆ ಕಾರಣವಾದ ಪತ್ರದ ಬಗ್ಗೆಯೂ ಚಕಾರ ವೆತ್ತಿರುವ ಪ್ರಕಾಶ್ ಅಂಬೇಡ್ಕರ್ ಅವರು, ವಿಚಾರವಾದಿಗಳ ಬಂಧನಕ್ಕೆ ಕಾರಣವಾದ ಶಂಕಿತ ಪತ್ರದಲ್ಲಿ ಎಲ್ಲಿಯೂ ಪ್ರಧಾನಿ ಅಥವಾ ನರೇಂದ್ರ ಮೋದಿ ಎಂಬ ಪದ ಬಳಕೆಯೇ ಆಗಿಲ್ಲ. ಕೇವಲ ರಾಜೀವ್ ಗಾಂಧಿ ಮಾದರಿ ಎಂಬುದಷ್ಟೇ ಇತ್ತು. ಹೀಗಿರುವಾಗ ಪೊಲೀಸರೇಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳುವ ಮೂಲಕ ಪೊಲೀಸರ ತನಿಖೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹಿಂದೆ ಮುಂಬೈ ಪೊಲೀಸ್ ಮಹಾ ನಿರ್ದೇಶಕ ಪರಮ್ ಬೀರ್ ಸಿಂಗ್ ಅವರು, ವಿಚಾರವಾದಿಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ, ಅಲ್ಲಿ ಶಂಕಿತ ಕೆಲ ಪತ್ರಗಳನ್ನು ಓದಿದ್ದರು. ಈ ಪತ್ರಗಳನ್ನು ಉಲ್ಲೇಖಿಸಿ ಪ್ರಕಾಶ್ ಅಂಬೇಡ್ಕರ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಆಗಸ್ಟ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಹೈದರಾಬಾದ್ ನಲ್ಲಿ ಖ್ಯಾತ ಎಡಪಂಥೀಯ ಲೇಖಕ ವರವರರಾವ್, ಮುಂಬೈನಲ್ಲಿ ವೆರ್ನಾನ್ ಗೊನ್ಸಾಲ್ವ್ಸ್ ಮತ್ತು ಅರುಣ್ ಫೆರೀರಾ, ಫರೀದಾ ಬಾದ್ ನಲ್ಲಿ ಸುಧಾ ಭಾರದ್ವಾಜ್, ದೆಹಲಿಯಲ್ಲಿ ಗೌತಮ್ ನವಲಖಾ ಅವರ ಮನೆಗಳ ಮೇಲೆ ದಾಳಿ ಮಾಡಿ ಬಂಧಿಸಲಾಗಿತ್ತು. ಬಳಿಕ ಕೋರ್ಟ್ ಅವರಿಗೆ ಗೃಹಬಂಧನ ಆದೇಶ ನೀಡಿತ್ತು. 
SCROLL FOR NEXT