ದೇಶ

ಹೋರಾಟಗಾರರ ಬಂಧನ: ಪತ್ರಿಕಾಗೋಷ್ಠಿ ನಡೆಸಿದ ಪುಣೆ ಪೊಲೀಸರಿಗೆ ಬಾಂಬೆ 'ಹೈ' ತರಾಟೆ

Lingaraj Badiger
ಮುಂಬೈ: ಸುಪ್ರೀಂ ಕೋರ್ಟ್ ಆದೇಶದಂತೆ ಸದ್ಯ ಗೃಹ ಬಂಧನದಲ್ಲಿರುವ ಐವರು ಹೋರಾಟಗಾರರ ಬಂಧನ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಪುಣೆ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮಾನವ ಹಕ್ಕು ಹೋರಾಟಗಾರರ ಬಂಧನಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ಬಹಿರಂಗಪಡಿಸವುದು ತಪ್ಪು ಎಂದು ಹೈಕೋರ್ಟ್  ವಿಭಾಗೀಯ ಪೀಠ ಹೇಳಿದೆ.
ಕಳೆದ ಆಗಸ್ಟ್ 31ರಂದು ಪುಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಪೊಲೀಸರು, ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಸ್ಪಷ್ಟ ಪುರಾವೆ ಸಿಕ್ಕ ನಂತರವೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದರು.
ನಕ್ಸಲರೊಂದಿಗೆ ಅವರು ನಂಟು ಹೊಂದಿರುವುದು ಸ್ಪಷ್ಟವಾದ ನಂತರವೇ ನಾವು ವಿವಿಧ ನಗರಗಳಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಂಡಿದ್ದೇವೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪರಮ್ ಬಿರ್ ಸಿಂಗ್ ಅವರು ತಿಳಿಸಿದ್ದರು.
ಹೋರಾಟಗಾರರ ಪತ್ರವೊಂದು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಮತ್ತೊಂದು ಹತ್ಯೆ ನಡೆಸುವ ಕುರಿತು ಮಾತನಾಡಿದೆ ಎಂದು ಪರಮ್ ಬಿರ್ ಸಿಂಗ್ ಅವರು ಹೇಳಿದ್ದರು.
ರೋನಾ ವಿಲ್ಸನ್ ಮತ್ತು ಸಿಪಿಐ-ಮಾವೋ ನಾಯಕನ ನಡುವಿನ ಇ-ಮೇಲ್ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ 'ಮೋದಿ ರಾಜ್' ಅಂತ್ಯಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಕಳೆದ ಮಂಗಳವಾರ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ 10 ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದ ಪುಣೆ ಪೊಲೀಸರು, ಕ್ರಾಂತಿಕಾರಿ ಬರಹಗಾರ ವರವರ ರಾವ್ ಸೇರಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.
SCROLL FOR NEXT