ಜೈಪುರ : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜಸ್ತಾನ ಸರ್ಕಾರ ಶೀಘ್ರದಲ್ಲಿಯೇ ಬಾಮಶಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ಪೋನ್ ಗಳನ್ನು ನೀಡುವುದಾಗಿ ಹೇಳಿದೆ.
ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಆರ್ಥಿಕ ಮತ್ತು ಆರ್ಥಿಕೇತರ ಅನುಕೂಲಗಳನ್ನು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ದೊರಕಿಸುವುದು ಈ ಯೋಜನೆಯ ಗುರಿಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಪೋನ್ ಗಳನ್ನು ಪಡೆಯಲಿದ್ದಾರೆ.
ಮೊಬೈಲ್ ಪೋನ್ ಗಳಲ್ಲಿರುವ ಬಟನ್ ಒತ್ತುವ ಮೂಲಕ ಬಡವರು ಸಹ ಎಲ್ಲಾ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತಹ ಹೊಸ ಅಪ್ಲಿಕೇಷನ್ ವೊಂದನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಸರ್ಕಾರ ತಿಳಿಸಿದೆ.
ರಾಜಸ್ತಾವನ್ನು ಹೊರ ಜಗತ್ತಿಗೆ ಸಂಪರ್ಕಿಸುವ ನಿಟ್ಟಿನಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಉಚಿತವಾಗಿ ವೈ ಪೈ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ತಿಳಿಸಿದೆ. ಈ ಕಾರ್ಯಕ್ರಮ ಸೆಪ್ಟೆಂಬರ್ 1 ರಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ.