ದೇಶ

ಸೆಕ್ಷನ್ 377 ತೀರ್ಪು: ಐದು ಜನ, ಒಂದು ಕಾರಣ, ಒಂದು ಗೆಲುವಿನ ಹೋರಾಟ

Lingaraj Badiger
ನವದೆಹಲಿ: ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಹಿಂದೆ ಐವರು ವಕೀಲರ ಪಾತ್ರವಿದೆ.
ಲಿಂಗ ಪರಿವರ್ತನೆ ಮಾಡಿಕೊಂಡ(ಎಲ್ ಜಿಬಿಟಿಕ್ಯು) ಸಮುದಾಯಕ್ಕೆ ನ್ಯಾಯ ಕೊಡಿಸಲು ಈ ಐವರು ಒಗ್ಗಟ್ಟಿನ ಹೋರಾಟ ನಡೆಸಿ ಗೆಲುವಿನ ನಗೆ ಬೀರಿದ್ದಾರೆ.
ಈ ಐವರು ವಕೀಲರ ಪೈಕಿ ಒಬ್ಬರು ಮಾತ್ರ ಕೋರ್ಟ್ ನಲ್ಲಿ ವಾದ ಮಂಡಿಸಿದ್ದು, ಉಳಿದ ನಾಲ್ವರು ಬ್ಯಾಕ್ ರೂಮ್ ಸಂಶೋಧನೆಯಲ್ಲಿ ತೊಡಗುವ ಮೂಲಕ ವಾದಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಮಾನವೀಯತೆಯಿಂದ ನಾನು ಈ ಪ್ರಕರಣ ತೆಗೆದುಕೊಂಡೆ. ನ್ಯಾಯಕ್ಕಾಗಿ ವೈಯಕ್ತಿಕ ಹೋರಾಟ ನಡೆಸಿದೆ. ನನಗೆ ಇದು ಬರೀ ಒಂದು ಪ್ರಕರಣ ಅಲ್ಲ. ಬಲಿಪಶುವಾಗಿದ್ದ ಬಹಳಷ್ಟು ನನ್ನ ಬಾಲ್ಯ ಸ್ನೇಹಿತರಿಗಾಗಿ ನಡೆಸಿದ ವೈಯಕ್ತಿಕ ಹೋರಾಟ ಎಂದು 30 ವರ್ಷದ ವಕೀಲೆ ನೀಹಾ ನಾಗಪಾಲ್ ಅವರು ಹೇಳಿದ್ದಾರೆ.
ಸಮಾಜ ದೊಡ್ಡ ಸಂಖ್ಯೆಯಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರತಿ ವ್ಯಕ್ತಿಗೂ ಸಂವಿಧಾನದತ್ತವಾದ ಸಮಾನ ಹಕ್ಕು ನೀಡಬೇಕು ಎಂದು ನೀಹಾ ತಿಳಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ತಾವು ನಡೆಸಿದ ಹೋರಾಟವನ್ನು ನೆನಪಿಸಿಕೊಂಡ 36 ವರ್ಷದ ಪ್ರೀತ ಶ್ರೀಕುಮಾರ್ ಅವರು, ಪ್ರತಿಯೊಬ್ಬ ವ್ಯಕ್ತಿಯ ಲೈಂಗಿಕ ದೃಷ್ಟಿಕೋನ ನೈಸರ್ಗಿಕವಾಗಿದ್ದು, ಅದರಲ್ಲಿ ಅಚ್ಚರಿ ಮೂಡಿಸುವಂತದ್ದು ಏನೂ ಇಲ್ಲ. ನಾನು ತಾರತಮ್ಯದ ವಿರುದ್ಧ ಜನರ ಮೂಲಭೂತ ಹಕ್ಕುಗಳಿಗಾಗಿ ಹೋರಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಲಿಂಗಿಗಳ ಪರವಾಗಿ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ 42 ವರ್ಷದ ವಕೀಲೆ ಮನೆಕಾ ಗುರುಸ್ವಾಮಿ ಅವರು, ಎಲ್ಲರಿಗೂ ಸಮಾನತೆ ಸಿಗಬೇಕು ಎಂಬ ನನ್ನ ನಂಬಿಕೆಯೇ ಈ ಪ್ರಕರಣ ಕೈಗೆತ್ತಿಕೊಳ್ಳಲು ಕಾರಣವಾಯಿತು. ನಾನು ಯಾವಾಗಲೂ ನ್ಯಾಯ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
SCROLL FOR NEXT