ದೇಶ

ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಜಿಗಿದು ತಾಯಿಗೆ ಮರುಜನ್ಮ ನೀಡಿದ 11ರ ಬಾಲಕ!

Vishwanath S
ಗುವಾಹಟಿ: ಅಸ್ಸಾಂನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು ಭೀಕರ ಪ್ರವಾಹದ ನಡುವೆ 11 ವರ್ಷದ ಬಾಲಕ ಜೀವದ ಹಂಗನ್ನು ತೊರೆದು ನದಿಗೆ ಹಾರಿ ತಾಯಿ ಸೇರಿ ಮೂವರನ್ನು ರಕ್ಷಿಸಿದ್ದಾನೆ. 
ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕನನ್ನು 11 ವರ್ಷದ ಕಮಲ್ ಕಿಶೋರ್ ದಾಸ್ ಎಂದು ಗುರುತಿಸಲಾಗಿದೆ. ಕಮಲ್ ಕುಟುಂಬ ಬ್ರಹ್ಮಪುತ್ರ ನದಿಯಲ್ಲಿ ದೋಣಿಯಲ್ಲಿ ತೆರಳುತ್ತಿದ್ದಾಗ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ. ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಸೂಚಿಸಿದ್ದಾರೆ. ಅಂತೆ ಆತ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. 
ಆದರೆ ಹಿಂದೆ ತಿರುಗಿ ನೋಡಿದರೆ ತಾಯಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಕ್ಷಣ ಮಾತ್ರ ಯೋಚಿಸದೆ ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ. 
ಒಟ್ಟಾರೆ ಕಮಲ್ ಕಿಶೋರ್ ಧೈರ್ಯ ಸಾಹಸ ಮೆರೆದು ತಾಯಿ ಸೇರಿದಂತೆ ಮೂವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. 
ಇನ್ನು ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡಲು ತೆರಳುತ್ತಿದ್ದ ಇದೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು  ಸಹಾಯಕವಾಗಿದೆ ಎಂದು ಕಮಲ್ ತಾಯಿ ಹೇಳಿದ್ದಾರೆ.
SCROLL FOR NEXT