ದೇಶ

ದೆಹಲಿಯ ಮೊಹಲ್ಲಾ ಕ್ಲಿನಿಕ್ ಯೋಜನೆಯನ್ನು ಮನಸಾರೆ ಹೊಗಳಿದ ಬನ್ ಕಿ ಮೂನ್

Sumana Upadhyaya

ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರದ ಮೊಹಲ್ಲ ಕ್ಲಿನಿಕ್ ಯೋಜನೆಯನ್ನು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬನ್ ಕಿ ಮೂನ್ ಮತ್ತು ನಾರ್ವೆಯ ಮಾಜಿ ಪ್ರಧಾನಿ ಗ್ರೊ ಹಾರ್ಲೆಮ್ ಬ್ರುಂಡ್ಲ್ಯಾಂಡ್ ಹಾಡಿ ಹೊಗಳಿದ್ದಾರೆ.

ನನಗೆ ಈ ಆಸ್ಪತ್ರೆಯ ವ್ಯವಸ್ಥೆ ನೋಡಿ ತುಂಬಾ ಖುಷಿಯಾಗಿದೆ ಎಂದು ಬನ್ ಕಿ ಮೂನ್ ಪೀರಹರ್ಹಿ ಮೊಹಲ್ಲ ಕ್ಲಿನಿಕ್ ಮತ್ತು ಪಶ್ಚಿಮ ವಿಹಾರ ಪ್ರದೇಶದಲ್ಲಿ ಪಾಲಿ ಕ್ಲಿನಿಕ್ ಗೆ ಭೇಟಿ ನೀಡಿದ ನಂತರ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆರೋಗ್ಯ ಖಾತೆ ಸಚಿವ ಸತ್ಯೇಂದ್ರ ಜೈನ್ ಭೇಟಿ ವೇಳೆ ಅವರ ಜೊತೆಗಿದ್ದರು. ಮೊಹಲ್ಲ ಕ್ಲಿನಿಕ್ ಯೋಜನೆಯನ್ನು ದೇಶಾದ್ಯಂತ ಸ್ಥಾಪಿಸಬೇಕು ಎಂದು ಬ್ರುಂಡ್ಲ್ಯಾಂಡ್ ಹೇಳಿದ್ದಾರೆ.

ಇಲ್ಲಿನ ಮನಸ್ಸಿಗೆ ಹತ್ತಿರವಾಗುವ ರೀತಿಯ ಕೆಲಸವನ್ನು ನೋಡಿ ಖುಷಿಯಾಗಿದೆ. ಇದನ್ನು ದೇಶಾದ್ಯಂತ ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ. ಇವರು ವಿಶ್ವ ಆರೋಗ್ಯ ಸಂಘಟನೆಯ ಪ್ರಧಾನ ನಿರ್ದೇಶಕರು ಕೂಡ ಆಗಿದ್ದರು.

ಲಂಡನ್ ಮೂಲದ ಸ್ವತಂತ್ರ ಜಾಗತಿಕ ನಾಯಕರ ಸಂಘಟನೆಯಾದ ದಿ ಎಲ್ಡರ್ಸ್ ನ ರಾಯಭಾರಿಗಳಾಗಿ ಎರಡು ದಿನಗಳ ಭೇಟಿಗಾಗಿ ಮೂನ್ ಮತ್ತು ಬ್ರುಂಡ್ಲ್ಯಾಂಡ್ ಭಾರತಕ್ಕೆ ಆಗಮಿಸಿದ್ದಾರೆ. ಈ ಸಂಘಟನೆ ವಿಶ್ವಾದ್ಯಂತ ಶಾಂತಿ, ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದೆ. ದೆಹಲಿಯಲ್ಲಿ ಪ್ರಸ್ತುತ 189 ಮೊಹಲ್ಲಾ ಕ್ಲಿನಿಕ್ ಗಳಿದ್ದು ಅದನ್ನು ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಕೇಜ್ರಿವಾಲ್ ಸರ್ಕಾರ ಹೊಂದಿದೆ.

SCROLL FOR NEXT