ಬುಲ್ಧಾನ: ಯುವತಿಯನ್ನು ಅಪಹರಣ ಮಾಡಿಯಾದರೂ ಹುಡುಗನಿಗೆ ಒಪ್ಪಿಸುತ್ತೇನೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಮ್ ಕದಂ' ಅವರ ನಾಲಿಗೆ ಕತ್ತರಿಸಿದವರಿಗೆ ರೂ.5 ಲಕ್ಷ ಬಹುಮಾನ ನೀಡುತ್ತೇನೆಂದು ಕಾಂಗ್ರೆಸ್ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.
ಶಾಸಕ ಕದಂ ನಾಲಿಕೆ ಕತ್ತರಿಸಿದವರಿಗೆ ರೂ.5 ಲಕ್ಷ ಇನಾಮು ನೀಡುವುದಾಗಿ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಸುಬೀಧ್ ಸಯೋಜಿ ಹೇಳಿದ್ದು, ಈ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಯುವತಿಯನ್ನು ಅಪಹರಣ ಮಾಡುತ್ತೇನೆಂದು ಹೇಳಿದ್ದ ಶಾಸಕ ಕದಂ ನಾಲಿಗೆ ಕತ್ತರಿಸಲು ಮುಂದೆ ಬರುವವರಿಗೆ ರೂ.5 ಲಕ್ಷ ಇನಾಮು ನೀಡುವುದಾಗಿ ಸುಬೀಧ್ ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ದಹಿ ಹಂಡಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಕದಂ ಅವರು, ಹುಡುಗ ಇಷ್ಟಪಡುವ ಹುಡುಗಿಯನ್ನು ಅಪಹರಣ ಮಾಡಿಯಾದರೂ ತಂದು ಒಪ್ಪಿಸುತ್ತೇನೆಂದು ಹೇಳಿದ್ದರು. ಕದಂ ಅವರ ಈ ಹೇಳಿಕೆಗೆ ದೇಶದಾದ್ಯಂತ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಅಲ್ಲದೆ, ಮಹಾರಾಷ್ಟ್ರ ರಾಜ್ಯದ ಮಹಿಳಾ ಆಯೋಗದಿಂದ ಕದಂ ಅವರಿಗೆ ನೋಟಿಸ್ ಕೂಡ ಜಾರಿಯಾಗಿತ್ತು.