ದೇಶ

ಸಾಮೂಹಿಕ ಹಲ್ಲೆ ತೀರ್ಪು ಅನುಷ್ಠಾನಕ್ಕೆ ರಾಜ್ಯಗಳಿಗೆ ಒಂದು ವಾರ ಸಮಯ: 'ಸುಪ್ರೀಂ' ಸೂಚನೆ

Manjula VN
ನವದೆಹಲಿ: ದೇಶದಾದ್ಯಂತ ತೀವ್ರ ಸುದ್ದಿ ಹಾಗೂ ಚರ್ಚೆಗಳಿಗೆ ಗ್ರಾಸವಾಗಿದ್ದ ಸಾಮೂಹಿಕ ಹಲ್ಲೆ ಪ್ರಕರಣ ಸಂಬಂಧ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 
ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ತಡೆಯಲು ಆಯಾ ರಾಜ್ಯಗಳು ಈ ಹಿಂದೆ ನೀಡಿದ್ದ ತೀರ್ಪನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ಈ ಕುರಿತು ವಾರಗಳಲ್ಲಿ ವರದಿ ಸಲ್ಲಿಸುವೆ ಸೂಚಿಸಿದೆ ಎಂದು ತಿಳಿದುಬಂದಿದೆ. 
ಜುಲೈ.17 ರಂದು ನೀಡಲಾಗಿದ್ದ ತೀರ್ಪು ಸಂಬಂಧ 11 ರಾಜ್ಯಗಳು ವರದಿ ಸಲ್ಲಿಸಿವೆ. ಇನ್ನುಳಿದ ರಾಜ್ಯಗಳು ವರದಿ ಸಲ್ಲಿಸಿಲ್ಲ. ಉಳಿದ ರಾಜ್ಯಗಳೂ ಕೂಡ ವಾರದೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ವರದಿ ಸಲ್ಲಿಕೆಯಾಗದೇ ಹೋದರೆ, ಆಯಾ ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ತಿಳಿಸಿದೆ ಎಂದು ವರದಿಗಳು ತಿಳಿಸಿವೆ. 
ಜುಲೈ. 17 ರಂದು ಆದೇಶ ಹೊರಡಿಸಿದ್ದ ನ್ಯಾ.ದೀಪಕ್ ಮಿಶ್ರಾ, ಎ.ಎಂ.ಖಾನ್ ವಿಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರಿದ್ದ ಪೀಠ, ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳನ್ನು ತಡೆಯಲು ಆಗತ್ಯ ಕಾನೂನು ರೂಪಿಸಬೇಕೆಂದು ಆದೇಶಿಸಿದ್ದರು. ಅಲ್ಲದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಪ್ರೀಂಕೋರ್ಟ್'ಗೆ ಈ ಕುರಿತು ವರದಿಯನ್ನೂ ಸಲ್ಲಿಸಬೇಕೆಂದು ಸೂಚಿಸಿದ್ದರು. 
ಒಬ್ಬ ವ್ಯಕ್ತಿಯ ಮೇಲೆ ಜನರು ಹಲ್ಲೆ ನಡೆಸುವುದು ತಪ್ಪು. ಅದು ಗೋವು ಕಳ್ಳತನ ಪ್ರಕರಣವಾಗಿರಬಹುದು ಅಥವಾ ಮಕ್ಕಳ ಕಳ್ಳನಾಗಿರಬಹುದು. ಇಲ್ಲಿ ಕಾರಣ ಮುಖ್ಯವಾಗದು. ಜನರು ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧವೇ ಆಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. 
SCROLL FOR NEXT