ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡಿದರೆ, ಕಾಂಗ್ರೆಸ್ ಭಾರತ ಮುರಿಯುವುದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2014ಕ್ಕಿಂತಲೂ ದೊಡ್ಡ ಮಟ್ಟದ ಗೆಲವು ಸಾಧಿಸಲಿದೆ ಎಂದರು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 543 ಸ್ಖಾನಗಳ ಪೈಕಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಹೀಗಾಗಿ ಬಿಜೆಪಿ ಮುಂದಿನ ಲೋಕಸಭೆಯಲ್ಲಿ ಇನ್ನೂ ದೊಡ್ಡಮಟ್ಟದ ಗೆಲುವು ಸಾಧಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಹಾಘಟಬಂಧನ್ ಜನರ ಕಣ್ಣೋರೆಸುವ ತಂತ್ರ ಮತ್ತು ಅದೊಂದು ಭ್ರಮೆ ಅಷ್ಟೆ ಎಂದರು.
ಪ್ರತಿಪಕ್ಷಗಳು ಜನರನ್ನು ಗೊಂದಲಕ್ಕೆ ದೂಡುವ ಪ್ರಯತ್ನ ಮಾಡುತ್ತಿದ್ದು, ಇದರಲ್ಲಿ ಅವರು ಯಾವುದೇ ಕಾರಣಕ್ಕೂ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ನಾವು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಧನೆಗಳನ್ನು ಜನರಿಗೆ ತಲುಪಿಸುವುದು ಮುಖ್ಯವಾಗಿದೆ. ಈ ವಿಚಾರಗಳ ಮೂಲಕ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics