ದೇಶ

ದಿನ 1 ಗಂಟೆ ಹೆಚ್ಚುವರಿ ಅಂಗಡಿ ತೆರೆಯುತ್ತೇವೆ: ಭಾರತ್ ಬಂದ್ ವಿರೋಧಿಸಿದ ಅಂಗಡಿ ಮಾಲೀಕರು!

Srinivasamurthy VN
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಇದೇ ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪೈಕಿ ಕೆಲ ಅಂಗಡಿ ಮಾಲೀಕರು ಕೂಡ ತಾವು ಬಂದ್ ವಿರೋಧಿಸಿ ಹೆಚ್ಚುವರಿ 1 ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳು ಹರಿದಾಡುತ್ತಿದ್ದು, ನಿತ್ಯ ಬಳಕೆಯ ವಸ್ತುಗಳ ಅಂಗಡಿ ಮಾಲೀಕರೂ ಸೇರಿದಂತೆ ದಿನಸಿ, ತರಕಾರಿ ಮತ್ತು ಇತರೆ ಮಳಿಗೆ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂದೆ ಈ ಕುರಿತು ಬೋರ್ಡ್ ಹಾಕಿ ಕೊಂಡು ಬಂದ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಸೆಪ್ಟೆಂಬರ್ 10 ಅಂದರೆ ಭಾರತ್ ಬಂದ್ ದಿನ ಹೆಚ್ಚುವರಿಯಾಗಿ ಒಂದು ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಬಹಿರಂಗವಾಗಿಯೇ ಬೋರ್ಡ್ ಗಳಲ್ಲಿ ಬರೆದು ನೇತು ಹಾಕಿದ್ದಾರೆ.
ಅಂತೆಯೇ ಇತ್ತ ಭಾರತ್ ಬಂದ್ ವಿಫಲಗೊಳಿಸಲು ಕೆಲ ಸಂಘಟನೆಗಳು ಯತ್ನಿಸುತ್ತಿದ್ದು, ಭಾರತ್ ಬಂದ್ ದಿನ ಅಂಗಡಿ ಮುಂಗಟ್ಟು ತೆರೆಯುವಂತೆ ಅಂಗಡಿ ಮಾಲೀಕರ ಮನವೊಲಿಸುತ್ತಿರುವ ಘಟನೆಗಳು ಕೂಡ ಕೇಳಿ ಬಂದಿವೆ.
ಬದಲಾದ ತೈಲ ಮಾರುಕಟ್ಟೆ ಪರಿಸ್ಥಿತಿ, ಇರಾನ್ ಮೇಲಿನ ಅಮೆರಿಕ ನಿರ್ಬಂಧ, ಡಾಲರ್ ಮೌಲ್ಯ ಏರಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ದಿನೇ ದಿನೇ ತೈಲೋತ್ಪನ್ನಗಳ ಬೆಲೆ ಗಗನಕ್ಕೇರುತ್ತಿದ್ದು, ಈ ಹಿಂದೆಂದಿಂಗಿಂತಲೂ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಈ ಹಿನ್ನಲೆಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಇದೇ ಸೆಪ್ಟೆಂಬರ್ 10ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಅಲ್ಲದೆ ಇದಕ್ಕೆ ಯುಪಿಎ ಮೈತ್ರಿ ಪಕ್ಷಗಳು ಕೈ ಜೋಡಿಸಿವೆ.
SCROLL FOR NEXT