ದೇಶ

ರಾಫೆಲ್‌ ಯುದ್ಧ ವಿಮಾನ ಸ್ವಾಗತಕ್ಕೆ ಸದ್ದಿಲ್ಲದೆ ಐಎಎಫ್‌ ಸಿದ್ಧತೆ

Lingaraj Badiger
ನವದೆಹಲಿ: ಇತ್ತೀಚಿಗಷ್ಟೇ ಪೈಲಟ್ ಗಳಿಗೆ ರಾಫೆಲ್ ಯುದ್ಧ ವಿಮಾನದ ತರಬೇತಿ ನೀಡಿದ್ದ ಭಾರತೀಯ ವಾಯುಪಡೆ(ಐಎಎಫ್), ಇದೀಗ ಸದ್ದಿಲ್ದದೆ ಫ್ರಾನ್ಸ್ ನಿಂದ ರಾಫೆಲ್‌ ಯುದ್ಧ ವಿಮಾನಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ. 
ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದದ ನಡುವೆಯೇ ಐಎಎಫ್ ರಾಫೆಲ್‌ ಯುದ್ಧ ವಿಮಾನಕ್ಕೆ ಬೇಕಾದ ಮೂಲಸೌಕರ್ಯ ಸೃಷ್ಟಿ, ಪೈಲಟ್‌ಗಳ ತರಬೇತಿ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿದೆ. ವಿಶೇಷ ತರಬೇತಿಗಾಗಿ ವರ್ಷಾಂತ್ಯಕ್ಕೆ ಪೈಲಟ್‌ಗಳ ತಂಡವೊಂದನ್ನು ಫ್ರಾನ್ಸ್ ಗೆ ಕಳುಹಿಸಲೂ ಐಎಎಫ್‌ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ವಾಯುಪಡೆಯ ಹಲವು ತಂಡಗಳು ಫ್ರಾನ್ಸ್‌ಗೆ ಭೇಟಿ ನೀಡಿ, ರಾಫೆಲ್‌ ಯುದ್ಧ ವಿಮಾನದಲ್ಲಿ ಭಾರತಕ್ಕೆ ಬೇಕಾದ ಅಗತ್ಯಗಳ ಬಗ್ಗೆ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್‌ ಏವಿಯೇಷನ್‌ಗೆ ಮಾಹಿತಿ ನೀಡಿವೆ. 
ಭಾರತ 2016ರ ಸೆಪ್ಟೆಂಬರ್ ನಲ್ಲಿ 58 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಾಫೆಲ್‌ ಯುದ್ಧ ವಿಮಾನಗಳ ಖರೀದಿದಾಗಿ ಫ್ರಾನ್ಸ್‌ ಜತೆ ಒಪ್ಪಂದ ಮಾಡಿಕೊಂಡಿತ್ತು.
ಭಾರತಕ್ಕೆ ರಫ್ತಾಗಲಿರುವ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಾಫೆಲ್‌ ಯುದ್ಧವಿಮಾನಗಳ ಪ್ರಾಯೋಗಿಕ ಹಾರಾಟವನ್ನೂ ಡಸಾಲ್ಟ್‌ ಏವಿಯೇಷನ್‌ ಈಗಾಗಲೇ ಆರಂಭಿಸಿದ್ದು, 2019ರ ಸೆಪ್ಟೆಂಬರ್‌ ಅಂತ್ಯದೊಳಗೆ ಮೊದಲ ವಿಮಾನ ಪೂರೈಕೆಯಾಗಲಿದೆ.
SCROLL FOR NEXT