ದೇಶ

ಬಿಹಾರ: ಭಾರತ್ ಬಂದ್'ಗೆ ಸಿಲುಕಿದ ಆ್ಯಂಬುಲೆನ್ಸ್; ಆಸ್ಪತ್ರೆಗೆ ಸಾಗಿಸುವ ವೇಳೆ 2 ವರ್ಷ ಮಗು ಸಾವು

Manjula VN
ಪಾಟ್ನಾ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶದಾದ್ಯಂತ ಬಂದ್ ಆಚರಿಸಲಾಗುತ್ತಿದ್ದು, ಕಾಂಗ್ರೆಸ್ ಕರೆ ನೀಡಿರುವ ಈ ಬಂದ್ ಕರೆಗೆ ವಿವಿಧ ರಾಜ್ಯಗಳಿಂದ ವ್ಯಾಪಕ ಬೆಂಬಲಗಳು ವ್ಯಕ್ತವಾಗುತ್ತಿವೆ. ಈ ನಡುವಲ್ಲೇ, ಬಿಹಾರ ರಾಜ್ಯದಲ್ಲಿ ಬಂದ್ ಪರಿಣಾಮ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. 
ಪ್ರತಿಭಟನಾಕಾರರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರ ಪರಿಣಾಮ 2 ವರ್ಷದ ಬಾಲಕಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡದೆ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. 
ಪ್ರತಿಭಟನಾಕಾರರು ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ್ದರಿಂದ ರಸ್ತೆಯಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಎದುರಾಗಿತ್ತು. ಈ ವೇಳೆ ಆ್ಯಂಬುಲೆನ್ಸ್'ಗೆ ದಾರಿ ಮಾಡಿಕೊಡುವಂತೆ ಪ್ರತಿಭಟನಾಕಾರ ಬಳಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಪ್ರತಿಭಟನಾಕಾರರು ಕಿವಿಕೇಳಿಸಿದರೂ ಕೇಳದಂತೆ ವರ್ತಿಸಿದರು. ವೈರಲ್ ಜ್ವರದಿಂದ ಬಳಲುತ್ತಿದ್ದ ಮಗಳನ್ನು ಜೆಹನಾಬಾದ್ ಸಾದರ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು. ಸೂಕ್ತ ಸಮಯಕ್ಕೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮಗಳು ಮೃತಪಟ್ಟಿದ್ದಾಳೆಂದು ಪೋಷಕರು ಹೇಳಿದ್ದಾರೆ. 
ಆದರೆ, ಈ ಆರೋಪವನ್ನು ಜೆಹನ್ಬಾದ್ ಎಸ್'ಡಿಒ ಪಾರಿತೋಷ್ ಕುಮಾರ್ ಅವರು ತಿರಸ್ಕರಿಸಿದ್ದು, ಭಾರತ್ ಬಂದ್ ಪ್ರತಿಭಟನೆಯಿಂದ ಬಾಲಕಿ ಮೃತಪಟ್ಟಿಲ್ಲ. ಸಂಚಾರ ದಟ್ಟಣೆಯಿಂದಲೂ ಬಾಲಕಿ ಮೃತಪಟ್ಟಿಲ್ಲ. ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಮನೆಯಿಂದಲೇ ತಡವಾಗಿ ಹೊರಟಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆಂದು ಹೇಳಿದ್ದಾರೆ. 
ಭಾರತ್ ಬಂದ್'ಗೆ ಮಗು ಬಲಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಪ್ರತಿಭಟನೆ ಪರಿಣಾಮ ಮಗು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ  ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಇಂದು ಏನಾಗುತ್ತಿದೆ? ಪೆಟ್ರೋಲ್ ಪಂಪ್ ಗಳು ಹಾಗೂ ಬಸ್ ಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಪ್ರತಿಭಟನೆ ಹಾಗೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ಮಗುವೊಂದು ಮೃತಪಟ್ಟಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. 
SCROLL FOR NEXT