ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣಾಧೀನ ನ್ಯಾಯಮೂರ್ತಿಗಳ ಬಳಿ ವರದಿ ಕೇಳಿದ ಸುಪ್ರೀಂಕೋರ್ಟ್

Manjula VN
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ  ನ್ಯಾಯಮೂರ್ತಿಗಳ ಬಳಿ ಸುಪ್ರೀಂಕೋರ್ಟ್ ಸೋಮವಾರ ವರದಿ ಕೇಳಿದೆ. 
 ನ್ಯಾಯಮೂರ್ತಿ ಆರ್.ಎಫ್. ನಾರೀಮನ್ ಹಾಗೂ ಇಂದು ಮಲ್ಹೋತ್ರಾ ಅವರಿದ್ದ ಪೀಠ ಈ ವರದಿಯನ್ನು ಕೇಳಿದ್ದು, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂಎಂ ಜೋಷಿ ಹಾಗೂ ಉಮ ಭಾರತಿ ವಿರುದ್ಧದ ವಿಚಾರಣೆಯನ್ನು 2019ರ ಏಪ್ರಿಲ್ ಗಡುವಿನೊಳಗೆ ಪೂರ್ಣಗೊಳಿಸಲು ಯಾವ ರೀತಿಯ ಉದ್ದೇಶಗಳನ್ನು ಹೊಂದಲಾಗಿದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ವಿಚಾರಣಾಧೀನ ನ್ಯಾಯಮೂರ್ತಿಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. 
ಇದಲ್ಲದೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಪದೋನ್ನತಿಯನ್ನು ತಡೆ ಹಿಡಿದಿರುವ ಅಲಹಾಬಾದ್ ನ್ಯಾಯಲಯದ ಆದೇಶವನ್ನು ಪ್ರಶ್ನಿಸಿ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರ ಅರ್ಜಿ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೂ ಸುಪ್ರೀಂಕೋರ್ಟ್ ಸೂಚಿಸಿದೆ. ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 
2017 ಏಪ್ರಿಲ್ 19 ರಂದು ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಸೇವಕರು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. 
ಬಾಬ್ರಿ ಮಸೀದಿ ಧ್ವಂಸಗೊಳಿಸಲು ರೂಪಿಸಲಾಗಿದ್ದ ಸಂಚು ಪ್ರಕರಣದ ಬಗ್ಗೆ ಲಖನೌ ಹಾಗೂ ರಾಯ್ ಬರೇಲಿಯ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಚಾರಣೆ ನಡೆಯಬೇಕು ಎಂದಿದ್ದ ನ್ಯಾಯಾಲಯ, 4 ವಾರಗಳಲ್ಲಿ ವಿಚಾರಣೆ ಪ್ರಾರಂಭವಾಗಿ 2 ವರ್ಷಗಳಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳಬೇಕು ಅಂದರೆ, 2019ರ ಏಪ್ರಿಲ್ ತಿಂಗಳೊಳಗಾಗಿ ವಿಚಾರಣೆ ಮುಕ್ತಾಯಗೊಳ್ಳಬೇಕೆಂದು ಸೂಚಿಸಿತ್ತು.
SCROLL FOR NEXT