ದೇಶ

ತೆಲಂಗಾಣದಲ್ಲಿ ಭೀಕರ ಅಪಘಾತ: ಸರ್ಕಾರಿ ಬಸ್ ಉರುಳಿ ಬಿದ್ದು 52 ಸಾವು, ಹಲವರಿಗೆ ಗಾಯ

Manjula VN
ಕೊಂಡಗಟ್ಟು (ತೆಲಂಗಾಣ): ತೆಲಂಗಾಣ ರಾಜ್ಯದ ಕೊಂಡಗಟ್ಟು ಘತ್ರೊದಾದ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸರ್ಕಾರಿ ಬಸ್ ವೊಂದು ಪಲ್ಟಿ ಹೊಡೆದ ಪರಿಣಾಮ 52 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಸರ್ಕಾರಿ ಬಸ್ ಶನಿವಾರಂ ಪೇಟ್ ನಿಂದ ಜಗತಿಯಾಲ್'ಗೆ ಸಾಗುತ್ತಿತ್ತು. ಘತ್ರೋದಾದ್ ಬಳಿ ಸಾಗುತ್ತಿದ್ದ ಆರ್'ಟಿಸಿ ಬಸ್ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಅಪಘಾತಕ್ಕೀಡಾದ ಬಸ್ ನಲ್ಲಿ ಸುಮಾರು 65ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಗಾಯಗೊಂಡವರನ್ನು ಜಗತಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 
ಇಂದು ಬೆಳಿಗ್ಗೆ 11.30 ರಿಂದ 12 ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದೆ. ಕೊಂಡಗಟ್ಟು ದೇಗುಲದಿಂದ ಬಸ್ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. 
ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದ ಭಕ್ತರು ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಮೃತರದಲ್ಲಿ ಬಹುತೇಕರು ಮಕ್ಕಳು ಹಾಗೂ ಮಹಿಳೆಯರಾಗಿದ್ದಾರೆಂದು ಪ್ರಾಣಾಪಾಯದಿಂದ ಪಾರಾದ ಕೆಲ ಪ್ರಯಾಣಿಕರು ಹೇಳಿದ್ದಾರೆ. 
ಚಾಲಕ ಸ್ಪೀಡ್ ಬ್ರೇಕರ್ ಗಮನಿಸಿದೆ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ಬಸ್ ಮೇಲಿದ್ದ ನಿಯಂತ್ರಣ ಕಳೆದುಕೊಂಡಿದ್ದ. ಬಳಿಕ ಬಸ್ ಪಲ್ಟಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. 
ಬ್ರೇಕ್ ಫೇಲ್ ಆಗಿದ್ದೇ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಡಿಪೋ ನಿರ್ವಾಹಕ ವೆಮುಲ್ವಾಡಾ ಅವರು ಬಸ್ ಸಂಪೂರ್ಣವಾಗಿ ಉತ್ತಮವಾಗಿಯೇ ಇತ್ತು ಎಂದಿದ್ದಾರೆ. 
ಘಟನೆ ಕುರಿತಂತೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕರಾದ ಟಿಪಿಸಿಸಿ ಅಧ್ಯಕ್ಷ ಎನ್ ಉತ್ತಮ್ ಕುಮಾರ್ ರೆಡ್ಡಿ, ಕಾಂಗ್ರೆಸ್ ನಾಯಕ ಜನ ರೆಡ್ಡಿ ಹಾಗೂ ಎಲ್. ರಾಮಣ ಅವರು ಮೃತರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ. 
ಇದರಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 
SCROLL FOR NEXT