ದೇಶ

ಬಹುಕೋಟಿ ಚಾಪರ್ ಹಗರಣ: ಪ್ರಮುಖ ಆರೋಪಿ ಐಎಎಫ್ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ಜಾಮೀನು!

Srinivasamurthy VN
ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಬಹುಕೋಟಿ ವಿವಿಐಪಿ ಚಾಪರ್ ಹಗರಣದ ಪ್ರಮುಖ ಆರೋಪಿ ಭಾರತೀಯ ವಾಯು ಸೇನೆ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ದೆಹಲಿ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಎಸ್ ಪಿ ತ್ಯಾಗಿ ಪರ ವಕೀಲರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ನ ವಿಶೇಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು, ಎಸ್ ಪಿ ತ್ಯಾಗಿ ಮತ್ತು ಅವರ ಸಹೋದರ ಸಂಬಂಧಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಎಲ್ಲ ಆರೋಪಿಗಳಿಗೂ ತಲಾ ಒಂದು ಲಕ್ಷ ರೂ. ಭದ್ರತಾ ಶೂರಿಟಿ ನೀಡಿ ಜಾಮೀನು ಪಡೆಯುವಂತೆ ಕೋರ್ಟ್ ಸೂಚನೆ ನೀಡಿದೆ. ಅಂತೆಯೇ ಮುಂದಿನ ವಿಚಾರಣೆಗಳಿಗೆ ಅಗತ್ಯಬಿದ್ದರೆ ಕಡ್ಡಾಯ ಹಾಜರಾಗಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಈ ಹಿಂದೆ ಜುಲೈ 24 ರಂದು ಪ್ರಕರಣದ ಆರೋಪಿಗಳಾದ ಎಸ್ ಪಿ ತ್ಯಾಗಿ, ಮಧ್ಯವರ್ತಿಗಳಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಫಿನ್ ಮೆಕ್ಕಾನಿಕಾ ಸಂಸ್ಥೆಯ ನಿರ್ದೇಶಕ ಗಿಸೆಪ್ಪೆ ಓರ್ಸಿ ಮತ್ತು ಬ್ರುನೋ ಸ್ಪಾಂಗ್ನೋಲಿನಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಸಮನ್ಸ್ ಹಿನ್ನಲೆಯಲ್ಲಿ ಎಸ್ ಪಿ ತ್ಯಾಗಿ ಮತ್ತು ಅವರ ಸಹದೋರ ಸಂಬಂಧಿಗಳು ಕೋರ್ಟ್ ಹಾಜರಾಗಿ ಜಾಮೀನು ಪಡೆದಿದ್ದಾರೆ. ಪ್ರಕರಣದ ಉಳಿದ ಆರೋಪಿಗಳಾದ ಗಿಸೆಪ್ಪೆ ಓರ್ಸಿ, ಬ್ರುನೋ ಸ್ಪಾಂಗ್ನೋಲಿನಿ  ಮತ್ತು ದುಬೈ ಮೂಲದ ಉದ್ಯಮಿ ರಾಜೀಲ್ ಸಕ್ಸೇನಾ ಅವರು ಸೇರಿದಂತೆ ಭಾರತೀಯ ಮೂಲದ 28 ಆರೋಪಗಿಳಿಗೆ ಮತ್ತು ಕೆಲ ವಿದೇಶಿ ಉದ್ಯಮಿಗಳಿಗೆ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. 
SCROLL FOR NEXT