ದೇಶ

ಪೊಲೀಸರ ಮೇಲೆ ಭೀಕರ ಹಲ್ಲೆ ಮಾಡಿ ಪರಾರಿಯಾದ ಬಂಧಿತ ಕೈದಿ

Srinivasamurthy VN
ಭೋಪಾಲ್: ಬಂಧಿತ ಕೈದಿಯೋರ್ವ ಠಾಣೆಯಲ್ಲಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು 25 ವರ್ಷದ ವಿಷ್ಣು ರಜವತ್  ಎಂಬಾತನನ್ನು ಬಂಧಿಸಿದ್ದರು. ಆದರೆ ಬಂಧಿತ ವಿಷ್ಣು ರಜವತ್ ಮತ್ತು ಆತನ ಸ್ನೇಹಿತ ಪೊಲೀಸರ ಮೇಲೆ ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿಂಡ್ ಪೊಲೀಸರು ಇಬ್ಬರನ್ನೂ ಬಂಧಿಸಿ ಕರೆತಂದು ಠಾಣೆಯಲ್ಲಿರಿಸಿಕೊಂಡಿದ್ದರು. ಆದರೆ ಇಬ್ಬರನ್ನೂ ಸೆಲ್ ನೊಳಗೆ ಹಾಕದೇ ಠಾಣೆ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದ್ದರು. 
ಬಳಿಕ ವಿಷ್ಣು ಮತ್ತು ಆತನ ಸ್ನೇಹಿತ ಠಾಣೆ ಅವರಣದಲ್ಲೇ ಕುಳಿತುಕೊಂಡು ಸುಮಾರು ಹೊತ್ತು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪರಾರಿಯಾಗಲು ನಿರ್ಧರಿಸಿದ ವಿಷ್ಣು ಅಲ್ಲೇ ಪಕದ್ದಲ್ಲಿದ್ದ ಗುದ್ದಲಿಯನ್ನು ತೆಗೆದುಕೊಂಡು ಟೇಬಲ್ ಮೇಲೆ ಕೆಲಸ ಮಾಡಿಕೊಂಡಿದ್ದ ಇಬ್ಬರು ಪೊಲೀಸರ ಮೇಲೆ ಗಂಭೀರ ಹಲ್ಲೆ ಮಾಡಿದ್ದಾನೆ. ಹಿಂದಿನಿಂದ ಮೊದಲ ಏಟು ಬೇಳುತ್ತಿದ್ದಂತೆಯೇ ಪೊಲೀಸ್ ಪೇದೆ ನೆಲಕ್ಕುರುಳಿದ್ದು, ಇದನ್ನು ಕಂಡ ಮತ್ತೋರ್ವ ಪೇದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದನಾದರೂ ಸಾಧ್ಯವಾಗದೇ ಆತ ಕೂಡ ಮಾರಣಾಂತಿಕ ಪೆಟ್ಟು ತಿಂದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಇವಿಷ್ಟೂ ದೃಶ್ಯಾವಳಿಗಳು ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಹಲ್ಲೆಗೊಳಗಾದ ಪೊಲೀಸ್ ಪೇದೆಗಳನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಪೈಕಿ ಮುಖ್ಯಪೇದೆ ಉಮೇಶ್ ಬಾಬು ಎಂಬುವವರು ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ರವಾನೆ ಮಾಡುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಪೇದೆ ಕೂಡ ಗಂಭೀರವಾಗಿದ್ದು, ಅವರಿಗೆ ಗ್ವಾಲಿಯರ್ ನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. 
ಕೈದಿಗಳು ಪರಾರಿಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ಬಂಧನದ ಬಳಿಕ ಮಾತನಾಡಿರುವ ಹಲ್ಲೆಕೋರ ವಿಷ್ಣು ರಜವತ್, ಪೊಲೀಸರು ನಮ್ಮನ್ನು ಸೆಲ್ ನೊಳಗೆ ಹಾಕದೇ ಅವರಣದಲ್ಲೇ ಕೂರಿಸಿದ್ದರು. ಹೀಗಾಗಿ ನಾನು ಪರಾರಿಯಾಗಬಹುದು ಎಂದು ಯೋಚನೆ ಮಾಡಿ ಕೈಗೆ ಸಿಕ್ಕ ಗುದ್ದಲಿಯಿಂದ ಅವರ ಮೇಲೆ ಹಲ್ಲೆ ಮಾಡಿ ಪರರಾಯಾದೆ ಎಂದು ತಪ್ಪೊಪ್ಪಿಕ್ಕೊಂಡಿದ್ದಾನೆ.
ಇನ್ನು ಬಂಧಿತ ವಿಷ್ಣು ವಿರುದ್ಧ ಪೊಲೀಸರ ಮೇಲೆ ಹಲ್ಲೆ, ಪರಾರಿ ಯತ್ನ, ಅಕ್ರಮ ಗಣಿಗಾರಿಕೆ, ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಲ್ವರೇಜ್ ಹೇಳಿದ್ದಾರೆ.
SCROLL FOR NEXT