ನವದೆಹಲಿ: ವೈದ್ಯರ ಭೇಟಿಗಾಗಿ ಕಾಯ್ದಿರಿಸುವಿಕೆ (ರಿಸರ್ವೇಷನ್) ಹಾಗೂ ವಿವಿಧ ಕಲ್ಯಾಣ ಯೋಜನೆ ಪ್ರಯೋಜನ ಪಡೆದುಕೊಳ್ಳಲು, ಕುಷ್ಟರೋಗಿಗಳಿಗೆ ಅಂಗವೈಕಲ್ಯ ಪ್ರಮಾಣಪತ್ರ ವಿತರಿಸಲು ಪ್ರತ್ಯೇಕ ನಿಯಮಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಆವರನ್ನೊಳಗೊಂಡ ಪೀಠವು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿರುವ ಕುಷ್ಠರೋಗ ನಿರ್ಮೂಲನೆ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಈ ಕುರಿತಂತೆ ನಿರ್ದೇಶನ ನೀಡಿದೆ.
"ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬಂದಿ ಕುಷ್ಟರೋಗಿಗಳ ಕುರಿತು ತಾರತಮ್ಯ ಮಾಡುವುದಿಲ್ಲ ಎನ್ನುವುದು ಖಚಿತವಾಗುವಂತೆ ಕ್ರಮ ಜರುಗಿಸಬೇಕು" ಪೀಠ ಹೇಳಿದೆ.
ಕುಷ್ಟರೋಗಿಗಳು ಬೇರೆಯಾಗಿ ಇರಬೇಕಾಗಿಲ್ಲ, ಅವರು ಸಹ ಉಳಿದವರಂತೆಯೇ ಸಾಮಾನ್ಯ ವೈವಾಹಿಕ ಜೀವನ ನಡೆಸಲು ಅನುಕೂಲವಾಗುವಂತೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕುಷ್ಠರೋಗ ಪೀಡಿತರ ಮಕ್ಕಳಿಗೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ತಾರತಮ್ಯ ಆಗುವುದಿಲ್ಲ ಎನ್ನುವುದುನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ. ಇದಕ್ಕಾಗಿ ಆಯಾ ಸರ್ಕಾರಗಳು ನೂತನ ನಿಯಮಾವಳಿಗಳನ್ನು ರಚಿಸಬೇಕೆಂದು ಅದು ಆದೇಶಿಸಿದೆ.
ದೇಶದಿಂದ ಕುಷ್ಠರೋಗವನ್ನು ನಿರ್ಮೂಲನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು ಸಮಗ್ರ ಯೋಜನೆಯೊಂದನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಳೆದ ಜುಲೈ 5ರಂದು ನಿರ್ದೇಶನ ನಿಡಿದ್ದಿತು."ವಾಸಿಮಾಡಬಹುದಾದ" ರೋಗವನ್ನು ಜನರ ಜೀವನದ ಮೇಲೆ ಪರಿಣಾಮ ಬೀರುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಕೋರ್ಟ್ ಹೇಳಿದೆ.
ಕುಷ್ಠರೋಗ ನಿರ್ಮೂಲನೆಗಾಗಿ ಸರ್ಕಾರ ಹೆಚ್ಚಿನ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ವಕೀಲ ಪಂಕಜ್ ಸಿನ್ಹಾ ಅವರು ಸಲ್ಲಿಸಿದ ಸಾರ್ವಜನಿಕ ಮನವಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಈ ನಿರ್ದೇಶನ ನಿಡಿದೆ.
ದೇಶದಿಂದ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ಕಡೆಗೆ ಸರ್ಕಾರ ಗಮನ ಹರಿಸದಿರುವುದು "ಅನ್ಯಾಯ" ಎಂದು ಈ ಮುನ್ನ ಕೋರ್ಟ್ ಭಾವಿಸಿತ್ತು.ಇದು "ಗುಣಪಡಿಸಬಹುದಾದ" ರೋಗವಾಗಿದ್ದರೂ ಸಹ ಜನಸ್ಸಾಮಾನ್ಯರ ದೃಷ್ಟಿಯಲ್ಲಿ ಇನ್ನೂ ಕಳಂಕಿತವಾಗಿಯೇ ಉಳಿದಿದೆ.