ಮೃತ ಬುರಾರಿ ಕುಟುಂಬಸ್ಥರ ಸಂಬಂಧಿಕರು
ನವದೆಹಲಿ: ಉತ್ತರ ದೆಹಲಿಯ ಬುರಾರಿಯಲ್ಲಿ ಜುಲೈನಲ್ಲಿ ಒಂದೇ ಕುಟುಂಬದ 11 ಮಂದಿ ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಫ್ ಎಸ್ ಎಲ್ ವರದಿ ಬಹಿರಂಗವಾಗಿದೆ.
ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಬದಲಾಗಿ ಮೌಢ್ಯವೊಂದನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆಂದು ಬಯಲಾಗಿದೆ.
ದೆಹಲಿ ಪೊಲೀಸರು ಜುಲೈನಲ್ಲಿ ಸಿಬಿಐ ಅಧಿಕಾರಿಗಳ ಬಳಿ ಸೈಕಾಲಜಿಕಲ್ ಅಟೋಪ್ಸಿ ಮಾಡುವಂತೆ ತಿಳಿಸಿದ್ದರು, ಬುಧವಾರ ಸಂಜೆ ಈ ವರದಿ ಪೊಲೀಸರ ಕೈ ಸೇರಿದೆ.
ವರದಿಯನ್ವಯ 'ಮೃತರ ಮನೋವೈಜ್ಞಾನಿಕ ಅಟೋಪ್ಸಿ ಅಧ್ಯಯನದಲ್ಲಿ ಈ ಘಟನೆಯು ಆತ್ಮಹತ್ಯೆಯಲ್ಲ, ಬದಲಾಗಿ ಮೌಢ್ಯದ ಆಚರಣೆ ನಡೆಯುವಾಗ ಸಂಭವಿಸಿದ ದುರ್ಘಟನೆ ಇದಾಗಿದೆ, ಯಾವೊಬ್ಬ ಸದಸ್ಯನೂ ಜೀವ ಕಳೆದುಕೊಳ್ಳಲು ಇಚ್ಛಿಸಿರಲಿಲ್ಲ' ಎಂದು ತಿಳಿದು ಬಂದಿದೆ.
ಸೈಕಲಾಜಿಕಲ್ ಅಟೋಪ್ಸಿ ಸಂದರ್ಭದಲ್ಲಿ ಸಿಬಿಐನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯವು, ಮೃತದೇಹಗಳು ಪತ್ತೆಯಾದ ಮನೆಯಲ್ಲಿ ಸಿಕ್ಕ ರಿಜಿಸ್ಟರ್ನಲ್ಲಿ ಬರೆಯಲಾದ ವಿಚಾರಗಳು ಹಾಗೂ ಪೊಲೀಸರು ದಾಖಲಿಸಿಕೊಂಡಿದ್ದ ದಿನೇಶ್ ಸಿಂಗ್ ಚೂಂಡಾವತ್ ಕುಟುಂಬ ಸದಸ್ಯರು ಹಾಗೂ ಮಿತ್ರರು ನೀಡಿದ್ದ ಹೇಳಿಕೆಗಳ ವಿಶ್ಲೇಷಣೆ ನಡೆಸಿತ್ತು.
ಸಿಎಫ್ಎಸ್ಎಲ್ ಕುಟುಂಬದ ಹಿರಿಯ ಸದಸ್ಯ ದಿನೇಶ್ ಸಿಂಗ್ ಚೂಂಡಾವತ್ಹಾಗೂ ಅವರ ತಂಗಿ ಸುಜಾತ ನಾಗ್ಪಾಲ್ ಹಾಗೂ ಇತರ ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಿತ್ತು..
ಸೈಕಾಲಜಿಕಲ್ ಅಟೋಪ್ಸಿಯಲ್ಲಿ ವ್ಯಕ್ತಿಯೊಬ್ಬನ ವೈದ್ಯಕೀಯ ದಾಖಲೆಯ ವಿಶ್ಲೇಷಣೆ ನಡೆಸಲಾಗುತ್ತದೆ. ಇದರೊಂದಿಗೆ ಅವರ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಿ, ಸಾಯುವ ಮೊದಲು ಅವರ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಅಧ್ಯಯನ ನಡೆಸಲಾಗುತ್ತದೆ. ಈ ಮೂಲಕ ವ್ಯಕ್ತಿ ಸಾಯುವ ಮುನ್ನ ಆತನ ಮಾನಸಿಕ ಸ್ಥಿತಿ ಹೇಗಿತ್ತು ಎಂದು ತಿಳಿಯುವ ಪ್ರಯತ್ನ ನಡೆಯುತ್ತದೆ.
ಕುಟುಂಬಸ್ಥರೆಲ್ಲಾ ಸೇರಿ ಈ ಮೌಢ್ಯ ಆಚರಣೆ ಮಾಡುವ ವೇಳೆ ಆಕಸ್ಮಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.