ರಾಯ್ಪುರ್: ಮನೆಯೊಂದರ ತ್ಯಾಜ್ಯ ಗುಂಡಿ ಸ್ವಚ್ಚಗೊಳಿಸುವ ಸಲುವಾಗಿ ಇಳಿದ ಐವರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಛತ್ತೀಸ್ ಗಢ, ಜಶ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಜಶ್ ಪುರದ ಪಂಡ್ರಿಪಾನಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮನೆಯ ಯಜಮಾನಿ ಹಾಗೂ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೋಲೀಸರು ತಿಳಿಸಿದರು.
ಸಾವಿತ್ರಿ (45), ಬದು ಟಾಮ್ (60), ಪರಮಜೀತ್ ಪೈಕ್ರಾ (19), ರಾಮ್ ಜೀವನ್ ರಾಮ್ 35) ಮತ್ತು ಈಶ್ವರ ಸಾಯಿ (40) ಮೃತರೆಂದು ಗುರುತಿಸಲಾಗಿದೆ.
ತ್ಯಾಜ್ಯ ಗುಂಡಿಗಿಳಿದ ಐವರಲ್ಲಿ ಯಾರೂ ಮೇಲೆ ಬಂದಿರಲಿಲ್ಲ, ಇದನ್ನು ಗ್ರಾಮದ ಮಗು ಒಂದು ಗಮನಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗುಂಡಿಯಲ್ಲಿ ಸಿಕ್ಕಿದ್ದ ಐವರನ್ನೂ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಎಲ್ಲರೂ ಮೃತರಾಗಿದ್ದರೆಂದು ಅವರ ಪರೀಕ್ಷೆ ನಡೆಸಿದ ವೈದ್ಯರು ಖಚಿತಪಡಿಸಿದರು.
ಅವರೆಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದಿದೆ, ಇನ್ನು ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿನ ನಿಖರ ಕಾರಣ ಪತ್ತೆಯಾಗಲಿದೆ ಎಂದು ಪೋಲೀಸರು ವಿವರಿಸಿದ್ದಾರೆ.