ದೇಶ

ರಾಹುಲ್ ಗಾಂಧಿ ಟ್ವೀಟ್ , ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆ ಸಂಘಟಿತ ಪಿತೂರಿಯೇ?; ಅರುಣ್ ಜೇಟ್ಲಿ ಸಂದೇಹ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು ಫ್ರಾನ್ಸ್ ನಲ್ಲಿ ವಿರೋಧ ಪಕ್ಷದಲ್ಲಿರುವ ಫ್ರಾಂಕೊಯಿಸ್ ಹಾಲೆಂಡ್ ಅವರ ಹೇಳಿಕೆಗೂ ಭಾರತದಲ್ಲಿ ರಾಹುಲ್ ಗಾಂಧಿಯವರು ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಆಪಾದನೆಗಳಿಗೂ ಬಹಳ ಸಾಮ್ಯತೆಯಿದೆ. ಎರಡೂ ದೇಶಗಳ ನಾಯಕರು ಏಕಕಾಲದಲ್ಲಿ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದು ನೋಡಿದರೆ ಇವರಿಬ್ಬರು ಮಾಡುತ್ತಿರುವ ಆರೋಪಗಳಲ್ಲಿ ಸಂಬಂಧವಿರಬಹುದು, ಎರಡೂ ದೇಶಗಳ ನಾಯಕರು ಉದ್ದೇಶಪೂರ್ವಕವಾಗಿಯೇ ಸೃಷ್ಟಿ ಮಾಡಿರುವ ಆರೋಪವಿದು ಎಂದು ಅರುಣ್ ಜೇಟ್ಲಿಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಆಗಸ್ಟ್ 30ರಂದು ರಾಹುಲ್ ಗಾಂಧಿ ಮುಂದಿನ ವಾರಗಳಲ್ಲಿ ಪ್ರಮುಖ ಸುದ್ದಿಯೊಂದನ್ನು ಬಿತ್ತರ ಮಾಡಲಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಅದಾಗಿ ಕೆಲವು ವಾರಗಳ ನಂತರ ಮೊನ್ನ ಸೆಪ್ಟೆಂಬರ್ 21ರಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರು ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಭಾರತ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇವೆರಡೂ ವಿಷಯಗಳನ್ನು ನೋಡಿದರೆ ಸರಿಯಾದ ಸಮಯಕ್ಕೆ ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಆರೋಪವಿದು ಎಂದು ಗೊತ್ತಾಗುತ್ತದೆ ಎಂದರು.

ರಾಹುಲ್ ಗಾಂಧಿಯವರು ದ್ವೇಷ ಸಾಧಿಸುವ ಮನೋಭಾವದಲ್ಲಿದ್ದಾರೆ ಎಂದು ಕಾಣುತ್ತದೆ. ಈ ಇಡೀ ವಿಷಯವನ್ನು ಅವರಿಗೆ ಬೇಕಾದಂತೆ ತಿರುಚಿದಲ್ಲಿ ನನಗೆ ಯಾವುದೇ ಆಶ್ಚರ್ಯವಿಲ್ಲ. ಆಗಸ್ಟ್ 30ರಂದು ರಾಹುಲ್ ಗಾಂಧಿ, ಸ್ವಲ್ಪ ಕಾಯಿರಿ, ಪ್ಯಾರಿಸ್ ನಲ್ಲಿ ಬಾಂಬೊಂದು ಸ್ಫೋಟವಾಗಲಿದೆ ಎಂದು ಏಕೆ ಟ್ವೀಟ್ ಮಾಡಿದರು? ಅದಕ್ಕೆ ಸರಿಯಾಗಿ ಕೆಲವು ದಿನಗಳು ಕಳೆದ ನಂತರ ಅವರ ಆರೋಪದ ಧಾಟಿಯಲ್ಲಿಯೇ ಫ್ರಾನ್ಸ್ ನ ಮಾಜಿ ಅಧ್ಯಕ್ಷರಿಂದ ಆರೋಪ ಕೇಳಿಬಂತು ಎಂದು ಅರುಣ್ ಜೇಟ್ಲಿ ಹೇಳುತ್ತಾರೆ.

ಹಾಗಾದರೆ ಭಾರತ ಮತ್ತು ಫ್ರಾನ್ಸ್ ನಲ್ಲಿ ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರದ ವಿರುದ್ಧ ರಹಸ್ಯವಾಗಿ ಪಿತೂರಿ ನಡೆಸುತ್ತಿದೆಯೇ ಎಂದು ಕೇಳಿದಾಗ, ಅದು ನನಗೆ ಗೊತ್ತಿಲ್ಲ, ಆದರೆ ಆಗಸ್ಟ್ 30ರಂದು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಗೂ ಫ್ರಾನ್ಸ್ ನಲ್ಲಿ ಫ್ರಾಂಕೊಯಿಸ್ ಮಾಡಿರುವ ಆರೋಪಗಳಿಗೂ ಕಾಕತಾಳೀಯವಿದೆ ಎಂದರು.

ರಾಹುಲ್ ಗಾಂಧಿ ಆಗಸ್ಟ್ 30ರಂದು ಮಾಡಿದ್ದ ಟ್ವೀಟ್ ನಲ್ಲಿ, ಜಾಗತಿಕ ಭ್ರಷ್ಟಾಚಾರ, ರಫೆಲ್ ಯುದ್ಧ ವಿಮಾನ ಬಹಳ ಎತ್ತರಕ್ಕೆ, ದೂರದಲ್ಲಿ ವೇಗವಾಗಿ ಹಾರಾಡುತ್ತದೆ. ಆದರೆ ಇನ್ನು ಕೆಲವೇ ವಾರಗಳಲ್ಲಿ ದೊಡ್ಡ ಬಾಂಬ್ ಸ್ಫೋಟವಾಗುವುದರೊಂದಿಗೆ ವಿಮಾನ ಕೆಳಗೆ ಬೀಳುತ್ತದೆ, ಮೋದಿಯವರೇ ಫ್ರಾನ್ಸ್ ನಲ್ಲಿ ದೊಡ್ಡ ಸಮಸ್ಯೆಯಿದೆ ಎಂದು ಅನಿಲ್ ಅಂಬಾನಿಯವರಿಗೆ ಹೇಳಿ ಎಂದು ಟ್ವೀಟ್ ಮಾಡಿದ್ದರು.

ಅದಾಗಿ ಕೆಲವೇ ವಾರಗಳು ಕಳೆದ ನಂತರ ಮೊನ್ನೆ ಸೆಪ್ಟೆಂಬರ್ 21ರಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್, ಫ್ರಾನ್ಸ್ ನ ಪತ್ರಿಕೆ ಮೀಡಿಯಾಪಾರ್ಟ್ ಗೆ ನೀಡಿದ್ದ ಸಂದರ್ಶನದಲ್ಲಿ ರಫೆಲ್ ಯುದ್ಧ ವಿಮಾನಕ್ಕೆ ಡಸ್ಸೌಲ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲು ನಿರ್ಧಾರ ಮಾಡುವ ಸ್ಥಿತಿಯಲ್ಲಿರಲಿಲ್ಲ. ರಿಲಯನ್ಸ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡದ್ದು ಭಾರತ ಸರ್ಕಾರದ ತೀರ್ಮಾನವಾಗಿತ್ತು.

ಆದರೆ ನಂತರ ಕೆನಡಾದಲ್ಲಿ ಫ್ರಾನ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ಹಾಲೆಂಡ್, ರಿಲಯನ್ಸ್ ಜೊತೆ ಕೆಲಸ ಮಾಡಲು ಡಸ್ಸೌಲ್ಟ್ ಮೇಲೆ ಭಾರತ ಒತ್ತಡ ಹಾಕಿದೆಯೇ ಎಂಬ ಬಗ್ಗೆ ಅರಿವಿಲ್ಲ ಅದಕ್ಕೆ ಡಸ್ಸೌಲ್ಟ್ ಮಾತ್ರ ಉತ್ತರಿಸಬೇಕು ಎಂದು ಹೇಳಿದ್ದರು.
ಹಾಲೆಂಡ್ ಅವರ ಹೇಳಿಕೆಗಳು ವೈರುಧ್ಯವಾಗಿದೆ. ಫ್ರಾನ್ಸ್ ಸರ್ಕಾರ ಮತ್ತು ಡಸ್ಸೌಲ್ಟ್ ಹೇಳಿಕೆಗೂ ಫ್ರಾಂಕೊಯಿಸ್ ಹೇಳಿಕೆಗೂ ವ್ಯತ್ಯಾಸವಿದೆ. ಇನ್ನೊಂದು ಬಾರಿ ಫ್ರಾಂಕೋಯಿಸ್ ಅವರೇ ಹೇಳಿಕೆಗಳನ್ನು ವೈರುಧ್ಯವಾಗಿ ನೀಡಬಹುದು ಎಂದು ಟೀಕಿಸಿದ್ದಾರೆ.

ರಫೆಲ್ ಯುದ್ಧ ವಿಮಾನವನ್ನು ಹೆಚ್ಚಿನ ದರ ನೀಡಿ ಖರೀದಿಸಲಾಗುತ್ತದೆಯೇ ಇಲ್ಲವೇ ಎಂಬುದನ್ನು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ)ಪರೀಕ್ಷಿಸುತ್ತದೆ. ಆರೋಪಗಳನ್ನು ಹೊರತುಪಡಿಸಿಯೂ ರಫೆಲ್ ಒಪ್ಪಂದ ರದ್ದಾಗುವುದಿಲ್ಲ. ರಫೆಲ್ ಒಪ್ಪಂದ ಭ್ರಷ್ಟಾಚಾರರಹಿತವಾಗಿದ್ದು ಅದು ರದ್ದಾಗುವ ಪ್ರಶ್ನೆಯೇ ಇಲ್ಲ ಎಂದು ಸಂದರ್ಶನದ ವೇಳೆ ಅರುಣ್ ಜೇಟ್ಲಿ ಹೇಳಿದ್ದಾರೆ.


SCROLL FOR NEXT