ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ನಾಲ್ವರು ಮಕ್ಕಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದುವರೆಗೂ ಸುಮಾರು 8 ಮಂದಿಯನ್ನು ರಕ್ಷಿಸಿದ್ದು, ಅದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸವಾನ್ ಪಾರ್ಕ್ ಸಮೀಪದ ಈ ಕಟ್ಟಡದಲ್ಲಿ ಬಾಡಿಗೆದಾರರು ಮಾತ್ರ ವಾಸವಾಗಿದ್ದರು. ಅಲ್ಲದೆ ಕಟ್ಟಡ ಸುಸ್ಥಿತಿಯಲ್ಲಿರಲಿಲ್ಲ. ಈ ಸಂಬಂಧ ಒಂದು ವರ್ಷಗಳ ಹಿಂದೆಯೇ ದೆಹಲಿ ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು ಎಂದು ಕಟ್ಟಡದಲ್ಲಿ ಅಂಗಡಿ ಬಾಡಿಗೆ ಪಡೆದಿರುವ ಸುನಿಲ್ ಕುಮಾರ್ ಗುಪ್ತ ಅವರು ತಿಳಿಸಿದ್ದಾರೆ.
ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.