ದೇಶ

ಶೌಚಾಲಯವಿಲ್ಲ ಎಂದು ಮನೆ ತೊರೆದ ನವವಿವಾಹಿತೆ: ಮನನೊಂದ ಪತಿ ಆತ್ಮಹತ್ಯೆ!

Raghavendra Adiga
ಚೆನ್ನೈ: ಹೊಸದಾಗಿ ಗಂಡನ ಮನೆ ಸೇರಿದ ನವವಧು ಒಬ್ಬಳು ಪತಿಯ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಬೇಸರಗೊಂಡು ಮನೆಬಿಟ್ಟು ತೆರಳಿದ್ದು ಪತ್ನಿ ಮನೆ  ತೊರೆದಕ್ಕಾಗಿ ಖೇದಗೊಂಡ ಪತಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.
ಸೇಲಂ ಜಿಲ್ಲೆ ಓಮಲೂರು ಬಳಿಯ ಕೊಟ್ಟಗೌಂಡಪಟ್ಟಿಯಲ್ಲಿ ಸೆಪ್ಟೆಂಬರ್ .25ರಂದು ಸಂಭವಿಸಿದ ಘಟನೆಯಲ್ಲಿ ಸೆಲ್ವದೊರೈ ಎನ್ನುವ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೆಲ್ವದೊರೈ ದೀಪಾ  ಎನ್ನುವ ಯುವತಿಯೊಡನೆ ವಿವಾಹವಾಗಿದ್ದು ಇವರಿಬ್ಬರದೂ ಪ್ರೇಮ ವಿವಾಹವಾಗಿತ್ತು. ಸೆಪ್ಟೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ಅದೇ ದಿನ ಸೆಲ್ವದೊರೈ ನೆಲೆಸಿದ್ದ ಕೊಟ್ಟಗೌಂಡಪಟ್ಟಿ ನಿವಾಸಕ್ಕೆ ಆಗಮಿಸಿದ್ದರು. 
ಆದರೆ ನವವಧುವಾಗಿ ಬಂದ ದೀಪಾ ಸೆಲ್ವದೊರೈ ಮನೆಯಲ್ಲಿ ಬಹಿರ್ದೆಶೆಗಾಗಿ ಶೌಚಾಲಯವಿಲ್ಲದ್ದನ್ನು ಕಂಡು ಆಘಾತಗೊಂಡಿದ್ದಾಳೆ. ತಕ್ಷಣವೇ ಶೌಚಾಲಯ ನಿರ್ಮಾಣವಾಗಬೇಕು, ಅಲ್ಲಿಯವರೆಗೆ ತಾವು ಹೋಟೆಲ್ ಕೋಣೆಯೊಂದರಲ್ಲಿ ಇರೋಣ ಎಂದು ಆಕೆ ಪತಿಯಲ್ಲಿ ವಾದಕ್ಕಿಳಿಯುತ್ತಾಳೆ. ಆದರೆ ಪತ್ನಿಯ ವಾದಕ್ಕೆ ಸೆಲ್ವದೊರೈ  ನಿರಾಕರಿಸಿದಾಗ ಆಕೆ ತವರಿಗೆ ಹಿಂದಿರುಗುತ್ತಾಳೆ.
ಇದಾದ ಬಳಿಕ ಪತಿ ಸೆಲ್ವದೊರೈ ಪತ್ನಿ ದೀಪಾಳ ಮನೆಗೆ ತೆರಳಿ ಆಕೆಯ ಮನವೊಲಿಸಲು ಯತ್ನಿಸಿದರೂ ಶೌಚಾಲಯ ನಿರ್ಮಾಣವಾಗದೆ ನಾನು ಆ ಮನೆಗೆ ಬರಲಾರೆ ಎಂದು ಹಠ ಹಿಡಿದಿದ್ದಾಳೆ. ಅಲ್ಲಿಂದ ಬೇಸರದಿಂದ ಹಿಂತಿರುಗಿದ್ದ ಆತ ಆ ದಿನವೆಲ್ಲಾ ಅದೇ ಚಿಂತೆಯಿಂದ ದುಃಖಿತನಾಗಿದ್ದ. ಇದರ ಮರುದಿನ ಬೆಳಗ್ಗೆ ಆತನ ಶವ ಬಾವಿಯಲ್ಲಿ ಪತ್ತೆಯಾಗುತ್ತದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. 
ಘಟನೆ ಬೆಳಕಿಗೆ ಬಂದ ಬಳಿಕ ಕೊಟ್ಟಗೌಂಡಪಟ್ಟಿ ಗ್ರಾಮದ ಶೌಚಾಲಯದ ಸ್ಥಿತಿಗತಿಗಳ ಕುರಿತು ವರದಿ ನೀಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಡಳಿತ ತಾಕೀತು ಮಾಡಿದೆ.
ಅಧಿಕೃತ ಮಾಹಿತಿಯ ಪ್ರಕಾರ ಸೇಲಂ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿದೆ. ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ 2 ಲಕ್ಷಕ್ಕೆ ಹೆಚ್ಚು ಶೌಚಾಲಯ ನಿರ್ಮಾಣವಾಗಿದೆ. ಅಲ್ಲದೆ ಘಟನೆ ನಡೆದ ಗ್ರಾಮದಲ್ಲಿ ಸಹ ಸಾರ್ವಜನಿಕ ಶೌಚಾಲಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT