ದೇಶ

ಇಂದೋರ್: 50 ಲಕ್ಷ ಜನರ ಸಾವಿಗೆ ಕಾರಣವಾಗಬಲ್ಲ ಅಪಾಯಕಾರಿ ರಾಸಾಯನಿಕ ವಶ, ಪಿಎಚ್‌ಡಿ ಪದವೀಧರನ ಬಂಧನ

Raghavendra Adiga
ಇಂದೋರ್: ಮಧ್ಯ ಪ್ರದೇಶದ ಇಂದೋರ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದ  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸುಮಾರು 50 ಲಕ್ಷ ಜನರನ್ನು ಕೊಲ್ಲಬಲ್ಲ 9 ಕೆಜಿ ಸಂಶ್ಲೇಷಿತ ಅತ್ಯಂತ ವಿಷಕಾರಿ ರಾಸಾಯನಿಕ ಒಪಿಯಾಡ್ ಹಾಗೂ ಫೆಂಟನೈಲ್ ಅನ್ನು ವಶಕ್ಕೆ ಪಡೆಇದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಗಳ ಸಹಾಯದೊಡನೆ ನಡೆದಿದ್ದ ಈ ದಾಳಿಯ ವೇಳೆ ಅಮೆರಿಕಾ ವಿರೋಧಿಯಾಗಿದ್ದ ಪಿಎಚ್‌ಡಿ ಪದವೀಧರ ಹಾಗೂ ಮೆಕ್ಸಿಕೋ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.
ಈ ರಾಸಾಯನಿಕವನ್ನೇನಾದರೂ ರಾಸಾಯನಿಕ ಯುದ್ಧದಲ್ಲಿ ಬಳಕೆ ಮಾಡಿದ್ದಾದರೆ ದೊಡ್ಡ ಪ್ರಮಾಣದ ಸಾವು-ನೋವಿಗೆ ಇದು ಕಾರಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿನಾಶಕಾರಿ ರಾಸಾಯನಿಕ ವಶಕ್ಕೆ ಪಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅವರು ವಿವರಿಸಿದರು.
ಸ್ಥಳೀಯ ಉದ್ಯಮಿ ಹಾಗೂ ಅಮೆರಿಕದಿಂದ ಪಿಎಚ್‍ಡಿ ಪಡೆದ ರಾಸಾಯನಿಕ ವಿದ್ವಾಂಸ ಪಾಲುದಾರಿಕೆಯಲ್ಲಿ ಈ ಪ್ರಯೋಗಾಲಯ ನಡೆಯುತ್ತಿತ್ತು.
ವಶಕ್ಕೆ ಪಡೆಯಲಾದ ರಾಸಾಯನಿಕಗಳ ಅಂದಾಜು ಮೌಲ್ಯ 110 ಕೋಟಿ ರೂ. ಎನ್ನಲಾಗಿದ್ದು ಫೆಂಟನೈಲ್ ರಾಸಾಯನಿಕ ಹೆರಾಯಿನ್ ಗಿಂತಲೂ ಐವತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.ಇದರ ಕಣಗಳು ಉಸಿರಾಟದಲ್ಲಿ ಸಿಕ್ಕರೆ ಅದು ಅತ್ಯಂತ ಮಾರಕ ಪರಿಣಾಮವನ್ನುಂಟು ಮಾಡುತ್ತದೆ. ಈ ನಿರ್ದಿಷ್ಟ ದಾಳಿಯ ಮೂಲಕ ಭಾರತದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದನ್ನು ತಡೆಯಲು ಸಾಧ್ಯವಾಗಿದೆ ಎಂದು ಡಿಆರ್‌ಐ ಮಹಾನಿರ್ದೇಶಕ ಡಿ.ಪಿ. ಡ್ಯಾಶ್  ಹೇಳಿದ್ದಾರೆ.
SCROLL FOR NEXT