ದೇಶ

ಅಡ್ವಾಣಿಯಂತಹ ಹಿರಿಯ ನಾಯಕರಿಗೆ ಬಿಜೆಪಿ ಅವಮಾನ: ಮೋದಿಗೆ ಶರದ್ ಪವಾರ್ ತಿರುಗೇಟು

Lingaraj Badiger
ವಾರ್ಧಾ: ಬಿಜೆಪಿ ಎಲ್ ಕೆ ಅಡ್ವಾಣಿಯಂತಹ ಹಿರಿಯ ನಾಯಕರಿಗೆ ಯಾವುದೇ ಗೌರವ ನೀಡುತ್ತಿಲ್ಲ ಎಂದು ತಮ್ಮನ್ನು ಹಿಟ್ ವಿಕೆಟ್ ಎಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಜಂಟಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಎನ್ ಸಿಪಿಯಲ್ಲಿ ಆಂತರಿಕ ಜಗಳ ನಡೆಯುತ್ತಿದೆ. ಪವಾರ್ ಅವರು ಪಕ್ಷದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ಅವರ ಸಂಬಂಧಿ(ಅಜಿತ್ ಪವಾರ್) ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅವರ ಮುಂದೆ ಶರದ್ ಪವಾರ್ ಹಿಟ್ ವಿಕೆಟ್ ಆಗಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.
ಒಂದು ಕಾಲದಲ್ಲಿ ಶರದ್ ಪವಾರ್ ಅವರು ತಾವು ಸಹ ಪ್ರಧಾನಿಯಾಗಬಹುದು ಎಂದು ಭಾವಿಸಿದ್ದರು. ಅಲ್ಲದೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಈಗ ತಾವು ರಾಜ್ಯಸಭೆಯಲ್ಲಿ ಸಂತೋಷವಾಗಿರುವುದಾಗಿ ಹೇಳಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದ್ದರು.
ಶರದ್ ಪವಾರ್ ಮಹಾರಾಷ್ಟ್ರದ ಜನಪ್ರಿಯ ನಾಯಕರೇ ಆಗಿದ್ದರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದಿತ್ತು. ಆದರೆ ಪರಿಸ್ಥಿತಿ ತಮಗೆ ಅನುಕೂಲಕರವಾಗಿಲ್ಲ ಮತ್ತು ಸೋಲಿನ ಭೀತಿಯಿಂದ ಅವರು ಸ್ಪರ್ಧಿಸುತ್ತಿಲ್ಲ ಎಂದು ಮೋದಿ ಟೀಕಿಸಿದರು.
ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್ ಸಿಪಿ ಮುಖ್ಯಸ್ಥ, ಹಿರಿಯರನ್ನು ಹೇಗೆ ಗೌರವಿಸಬೇಕು ಎಂದು ನಮ್ಮ ಪಕ್ಷಕ್ಕೆ ಗೊತ್ತಿದೆ. ಬಿಜೆಪಿ ರೀತಿ ನಾವು ಅಡ್ವಾಣಿಯಂತಹ ಹಿರಿಯ ನಾಯಕರನ್ನು ಕೈಬಿಡಲಿಲ್ಲ ಎಂದು ಹೇಳಿದ್ದಾರೆ.
ವಾರ್ಧಾದಲ್ಲಿ ಖಾಲಿ ಮೈದಾನ ನೋಡಿ ಹತಾಶೆಗೊಂಡ ಪ್ರಧಾನಿ ಮೋದಿ ಈ ರೀತಿ ಮಾತನಾಡಿದ್ದಾರೆ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಹೇಳಿದ್ದಾರೆ.
SCROLL FOR NEXT