ದೇಶ

ಎ-ಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ: ಪ್ರಧಾನಿ ಮೋದಿ ಘೋಷಣೆಗೂ ಮುನ್ನ ನಡೆದ ಮೊದಲ ಪರೀಕ್ಷೆ ವಿಫಲವಾಗಿತ್ತು!

Srinivasamurthy VN
ನವದೆಹಲಿ: ಭಾರತದ ಮೊಟ್ಟ ಮೊದಲ ಉಪಗ್ರಹ ನಿಗ್ರಹ ಕ್ಷಿಪಣಿ ಎ-ಸ್ಯಾಟ್ ಪರೀಕ್ಷಾರ್ಥ ಉಡಾವಣೆ ಯಶಸ್ವಿಗೂ ಮೊದಲು ನಡೆದಿದ್ದ ಮೊದಲ ಪರೀಕ್ಷಾರ್ಥ ಉಡಾವಣೆ ವಿಫಲವಾಗಿತ್ತು ಎಂದು ತಿಳಿದುಬಂದಿದೆ.
ಹೌದು.. ಡಿಆರ್ ಡಿಒ ವಿಜ್ಞಾನಿಗಳು ನಡೆಸಿದ್ದ ಮೊಟ್ಟ ಮೊದಲ ಉಪಗ್ರಹ ನಿಗ್ರಹ ಕ್ಷಿಪಣಿ ಎ ಸ್ಯಾಟ್ ಪರೀಕ್ಷಾರ್ಥ ಉಡಾವಣೆಯ ಯಶಸ್ಸನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ವಿಜ್ಞಾನಿಗಳ ಯಶಸ್ಸನ್ನು ಹೈಜಾಕ್ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವಂತೆಯೇ, ಇತ್ತ ಇದಕ್ಕೂ ಮೊದಲು ಒಂದು ತಿಂಗಳ ಹಿಂದೆ ನಡೆದಿದ್ದ ಮೊದಲ ಪರೀಕ್ಷಾರ್ಥ ಉಡಾವಣೆ ವಿಫಲವಾಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಈ ಬಗ್ಗೆ ಅಮೆರಿಕಕ್ಕೆ ಮೊದಲೇ ಮಾಹಿತಿ ಇತ್ತು ಎಂದು ಹೇಳಲಾಗಿದೆ.
ರಕ್ಷಣಾ ಮ್ಯಾಗಜಿನ್ ವೊಂದಕ್ಕೆ ಈ ಕುರಿತು ಲೇಖನವೊಂದನ್ನು ಬರೆದಿರುವ ಅಂಕಿತ್ ಪಾಂಡಾ ಎಂಬುವವರು, ಕಳೆದ ಫೆಬ್ರವರಿ 12ರಂದೇ ಭಾರತ ತನ್ನ ಮೊಟ್ಟ ಮೊದಲ ಉಪಗ್ರಹ ನಿಗ್ರಹ ಕ್ಷಿಪಣಿ ಎ-ಸ್ಯಾಟ್ ಅನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ ಕ್ಷಿಪಣಿಯಲ್ಲಿ ತಾಂತ್ರಿಕ ದೋಷದಿಂದಾಗಿ ಅದು ನಿಗದಿಪಡಿಸಿದ್ದ ಉಪಗ್ರಹದ ಗುರುತು ಪತ್ತೆ ಮಾಡುವಲ್ಲಿ ವಿಫಲವಾಗಿ ಉಡಾವಣೆಯಾದ ಕೇವಲ 30 ಸೆಕೆಂಡ್ ನಲ್ಲೇ ವಿಫಲಾಗಿತ್ತು. ಭೂ ಕೆಳಕಕ್ಷೆಯಲ್ಲಿರುವ ಒಂದು ಉಪಗ್ರಹವನ್ನು ಭಾರತ ಗುರಿಯಾಗಿರಿಸಿಕೊಂಡು ಉಡಾವಣೆ ಮಾಡಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಿಗಳಿಗೂ ಮಾಹಿತಿ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದಾದ ಬಳಿಕ ಭಾರತ ಕಳೆದ ಮಾರ್ಚ್ 27ರಂದು ಮತ್ತೆ ಎ-ಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ ನಡೆಸಿತ್ತು. ಈ ಬಾರಿ ನಿಗದಿ ಪಡಿಸಿದ್ದ ಗುರಿಯನ್ನು ಕ್ಷಿಪಣಿ ನಿಖರವಾಗಿ ಗುರಿ ಮುಟ್ಟುವ ಮೂಲಕ ಯಶಸ್ವಿಯಾಗಿತ್ತು. ಈ ವಿಚಾರವನ್ನು ಪ್ರಧಾನಿ ಮೋದಿ ದೇಶದ ಜನತೆಗೆ ತಮ್ಮ ವಿಶೇಷ ಭಾಷಣದಲ್ಲಿ ತಿಳಿಸಿದ್ದರು. ಅಲ್ಲದೆ ವಿಜ್ಞಾನಿಗಳ ಕೆಲಸಕ್ಕೆ ಅಭಿನಂದನೆ ತಿಳಿಸಿದ್ದರು.
ಇನ್ನು ಡಿಆರ್ ಡಿಒ ವಿಜ್ಞಾನಿಗಳ ಕಾರ್ಯವನ್ನು ತಾವೇ ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ವಿಜ್ಞಾನಿಗಳ ಯಶಸ್ಸನ್ನು ಹೈಜಾಕ್ ಮಾಡಿದ್ದಾರೆ, ಚುನಾವಣಾ ಸಂದರ್ಭದಲ್ಲಿ ಈ ಮೂಲಕ ಪ್ರಧಾನಿ ಮೋದಿ ಬಿಟ್ಟಿ ಪ್ರಚಾರ ಪಡೆದಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿದ್ದವು.
SCROLL FOR NEXT