ದೇಶ

ಭಾರತೀಯ ನೌಕಾಪಡೆಗೆ ಆನೆಬಲ ನೀಡಲಿರುವ 'ಅಮೆರಿಕದ ರೋಮಿಯೋ'

Srinivasamurthy VN
ವಾಷಿಂಗ್ಟನ್‌: ಭಾರತೀಯ ನೌಕಾಪಡೆ ಶೀಘ್ರ ಮತ್ತಷ್ಟು ವೃದ್ಧಿಸಲಿದ್ದು, ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್‌ ಮೆರೀನ್‌ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಲಿವೆ.
ಹೌದು.. ಅಮೆರಿಕ ನೌಕಾಪಡೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅತ್ಯಾಧುನಿಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಮೂಲಗಳ ಪ್ರಕಾರ ಭಾರತಕ್ಕೆ ಅಮೆರಿಕ ಒಟ್ಟು 24 ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡಲು ಅನುಮತಿ ನೀಡಿದೆ. ಈ 24 ಹೆಲಿಕಾಪ್ಟರ್ ಗಳಿಗೆ ಸುಮಾರು 2.4 ಬಿಲಿಯನ್ ಡಾಲ್ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.
ಸಾಗರ ತಳದಲ್ಲಿರುವ ಸಬ್‌ ಮೆರೀನ್‌ ಗಳನ್ನು ಗುರುತಿಸಿ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಈ 'ರೋಮಿಯೋ' ಹೆಲಿಕಾಫ್ಟರ್‌ ಗಳಿದೆ. ಅಮೆರಿಕಾದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್‌ ಹೀಡ್‌ ಮಾರ್ಟಿನ್‌ ಸಂಸ್ಥೆ ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರ ಈ ಕಾಪ್ಟರ್ ಗಳು ಭಾರತದ ಬತ್ತಳಿಕೆ ಸೇರಲಿವೆ.
ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿರುವ ಇಂಗ್ಲೆಡ್‌ ನ ಹಳೆಯ ಮಾದರಿ ಹೆಲಿಕಾಫ್ಟರ್‌ ಗಳಿಗೆ ಬದಲಿಯಾಗಿ ಈ ಎಂಹೆಚ್ 60 ಹೆಲಿಕಾಪ್ಟರ್ ಗಳು ಕಾರ್ಯನಿರ್ವಹಿಸಲಿವೆ.
ಎಲ್ಲಾ ಮಾದರಿಯ ಯುದ್ಧನೌಕೆಗಳಿಂದ ಕಾರ್ಯಾಚರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುವ ಈ ಹೆಲಿಕಾಫ್ಟರ್‌ ಗಳು ಸದ್ಯ ಲಭ್ಯವಿರುವ ನೌಕಾ ಹೆಲಿಕಾಫ್ಟರ್‌ ಗಳಲ್ಲೇ ಅತ್ಯಂತ ಆಧುನಿಕ ಮಾದರಿಯವುಗಳಾಗಿವೆ ಎಂದು ರಕ್ಷಣಾ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಭವಿಷ್ಯದಲ್ಲಿ ಇವುಗಳ ಸೇರ್ಪಡೆಯಿಂದಾಗಿ ಭಾರತೀಯ ನೌಕಾದಳದ ಸಾಮರ್ಥ್ಯ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದ ಜಲಪ್ರದೇಶವನ್ನು ಬಲಪಡಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಜಲಮಾರ್ಗಗಳಿಂದಲೂ ದೇಶದ ಸಾರ್ವಭೌಮತೆಗೆ ಅಪಾಯ ಒದಗುವ ಸಾಧ್ಯತೆಗಳಿರುವುದರಿಂದ ನೌಕಾಪಡೆಗೆ ಈ ರಿತಿಯ ಸುಸಜ್ಜಿತ ಹೆಲಿಕಾಫ್ಟರ್‌ ಗಳ ಅಗತ್ಯ ಒದಗಿಬಂದಿತ್ತು.
SCROLL FOR NEXT