ನವದೆಹಲಿ: ಬಿಬಿಸಿ ಸಂದರ್ಶನದಲ್ಲಿ 'ಮೋದಿ ಸೇನೆ' ಎಂದು ಕರೆಯುವವರು ದೇಶದ್ರೋಹಿಗಳು ಎಂದು ಹೇಳಿಲ್ಲ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಭಾರತೀಯ ಸೇನೆ ದೇಶಕ್ಕೆ ಸೇರಿದ್ದು, ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಯಾರಾದರೂ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದರೆ ಅದು ತಪ್ಪು. ಅಷ್ಟೇ ಅಲ್ಲ ಹೀಗೆ ಹೇಳುವವರು ದೇಶದ್ರೋಹಿಗಳು ಎಂದು ವಿಕೆ ಸಿಂಗ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿತ್ತು.
ಬಿಬಿಸಿ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್, ಆ ವರದಿಗಾರ ಕಟ್-ಪೇಸ್ಟ್ ಕೆಲಸ ಮಾಡುತ್ತಾರೆ. ಇದಕ್ಕಾಗಿ ಆ ಮಾಧ್ಯಮಕ್ಕೆ ಸಂಸ್ಥೆ ಎಷ್ಟು ಹಣ ಪಡೆದಿದೆ? ಎಂದು ಟ್ವೀಟ್ ಮಾಡಿದ್ದಾರೆ.
ಬಿಬಿಸಿ ತನ್ನ ಟ್ವೀಟರ್ ನಲ್ಲಿ ವಿಕೆ ಸಿಂಗ್ ಸಂದರ್ಶನದ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಮೋದಿಜೀ ಸೇನೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರು, ಸಶಸ್ತ್ರ ಪಡೆಗಳು ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ. ದೇಶಕ್ಕೆ ಸೇರಿದ್ದು. ಮೋದಿ ಸೇನೆ ಎನ್ನುವವರು ದೇಶ ದ್ರೋಹಿಗಳು ಎಂದಿದ್ದಾರೆ.
ಇನ್ನು ಬಿಬಿಸಿ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು, ಜನರಲ್ ವಿಕೆ ಸಿಂಗ್ ಅವರು ಸರಿಯಾಗಿಯೇ ಹೇಳಿದ್ದಾರೆ. ಮೋದಿ ಸೇನೆ ಎಂದು ಹೇಳುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡುವವರು ದೇಶದ್ರೋಹಿಗಳು. ಅವರ ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.