ದೇಶ

ಎ-ಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ 1 ಸಾವಿರ ಕಿ.ಮೀ ದೂರದ ಗುರಿಗಳ ಹೊಡೆದುರುಳಿಸಬಲ್ಲದು: ಡಿಆರ್ ಡಿಒ

Srinivasamurthy VN
ನವದೆಹಲಿ: ಇತ್ತೀಚೆಗೆ ಭಾರತೀಯ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಪರೀಕ್ಷೆ ನಡೆಸಿದ್ದ ಉಪಗ್ರಹ ನಿಗ್ರಹ ಕ್ಷಿಪಣಿ ಎಸ್ಯಾಟ್ 1000 ಕಿ.ಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲದು ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಡಿಆರ್ ಡಿಒ ಮಾಹಿತಿ ನೀಡಿದ್ದು, ಸ್ವದೇಶಿ ನಿರ್ಮಿತ ಉಪಗ್ರಹ ನಿಗ್ರಹ ಕ್ಷಿಪಣಿ ಎಸ್ಯಾಟ್ 1 ಸಾವಿರ ಕಿ.ಮೀ ದೂರದ ಗುರಿಗಳನ್ನೂ ಹೊಡೆದುರುಳುಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯ ಪರೀಕ್ಷಾರ್ಥ ಗುರಿಯಾಗಿ ಭೂ ಕೆಳಕಕ್ಷೆಯ 300 ಕಿಮೀ ದೂರದ ಗುರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಇದಕ್ಕಿಂತಲೂ ಮೂರು ಪಟ್ಟು ದೂರದ ಗುರಿಗಳನ್ನೂ ಕ್ಷಿಪಣಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಿಆರ್ ಡಿಒ ಅಧ್ಯಕ್ಷ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಭೂಕೆಳಕಕ್ಷೆಯಲ್ಲಿರುವ ಗುರಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮಿಷನ್ ಶಕ್ತಿ ಯೋಜನೆ ನಿಮಿತ್ತ ಎಸ್ಯಾಟ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಗೆಗಾಗಿ ಈ ಗುರಿಯನ್ನು ಆಯ್ಕೆ ಮಾಡಿಕೊಂಡಿದ್ದೆವು. ಅಲ್ಲದೆ ಭೂಕಳೆಕಕ್ಷೆಯಲ್ಲಿರುವ ಗುರಿಯನ್ನು ಧ್ವಂಸ ಮಾಡಿದರೆ ಬಾಹ್ಯಾಕಾಶದಲ್ಲಿ ಉಂಟಾಗುವ ಉಪಗ್ರಹ ಅವಶೇಷಗಳ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ ಕ್ಷಿಪಣಿ ಗುರಿಯನ್ನು ಛಿದ್ರಮಾಡಿದ ಬಳಿಕ ಉಂಟಾಗುವ ಅವಶೇಷಗಳು ಭೂಮಿಯ ವಾತಾವರಣ ತಲುಪಿ ಸುಟ್ಟು ಬೂದಿಯಾಗುತ್ತದೆ. ಹೀಗಾಗಿ ಇದರಿಂದ ಬಾಹ್ಯಾಕಾಶದಲ್ಲಿ ಯಾವುದೇ ರೀತಿಯ ಅಪಾಯವಾಗುವುದಿಲ್ಲ. ಇದೇ ಕಾರಣಕ್ಕೆ ಭೂಮಿಯ ಕೆಳ ಕಕ್ಷೆಯಲ್ಲಿರುವ ಮೈಕ್ರೋ ಉಪಗ್ರಹವನ್ನು ಗುರಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
SCROLL FOR NEXT