ದೇಶ

ಕಸ್ಟಮ್ಸ್ ಅಧಿಕಾರಿಗಳಿಗೆ ಕಿರುಕುಳ: ಪಶ್ಚಿಮ ಬಂಗಾಳದಲ್ಲಿ ಗಂಭೀರ ವಿಷಯ ಇದೆ ಎಂದ ಸುಪ್ರೀಂ ಕೋರ್ಟ್

Lingaraj Badiger
ನವದೆಹಲಿ: ಟಿಎಂಸಿ ಸಂಸದರ ಪತ್ನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಪಶ್ಚಿಮ ಬಂಗಾಳದಲ್ಲಿ ಏನೋ ಗಂಭೀರ ವಿಷಯ ಇದೆ ಎಂದು ಶುಕ್ರವಾರ ಅಭಿಪ್ರಾಯ ಪಟ್ಟಿದೆ.
ಈ ಸಂಬಂಧ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಸ್ಟಮ್ಸ್ ಅಧಿಕಾರಿಗಳ ಕಿರುಕುಳ ಪ್ರಕರಣ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ಯಾರೋ ಒಬ್ಬರು ನಮ್ಮ ಗಮನ ಸೆಳೆದಿದ್ದಾರೆ ಎಂದರೆ, ಅಲ್ಲಿ ಏನೋ ಗಂಭೀರ ವಿಷಯ ಇದೆ ಅಂತ ಅರ್ಥ. ಆ ಗಂಭೀರ ವಿಷಯ ಏನೂ ಅಂತ ನಮಗೆ ಗೊತ್ತಿಲ್ಲ. ಆದರೆ ಆ ಬಗ್ಗೆ ಥಳಮಟ್ಟದಿಂದಲೇ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಕಸ್ಟಮ್ಸ್ ಅಧಿಕಾರಿಗಳ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಾರ್ಚ್ 15-16ರಂದು ಈ ಘಟನೆ ನಡೆದಿದ್ದು, ಟಿಎಂಸಿ ಸಂಸದರ ಪತ್ನಿಯ ಲಗೇಜ್ ತಪಾಸಣೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಅವರ ವಿರುದ್ಧ ದೂರು ನೀಡಿ ಕಿರುಕುಳ ನೀಡುತ್ತಾರೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲ ಅಭಿಶೇಕ್ ಎಂ ಸಿಂಘ್ವಿ ಅವರು, ಅರ್ಜಿದಾರ ರಾಜುಕುಮಾರ್ ಭರತ್ವಾಲ್ ಅವರು ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿಯ ಸದಸ್ಯರು ಎಂಬುದನ್ನು ಉಲ್ಲೇಖಿಸಿಲ್ಲ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಬೇಡಿ ಎಂದರು.
ಈ ಅರ್ಜಿ ಸರಿಯಾಗಿದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಕಡೆಗಣಿಸುವಂತಿಲ್ಲ. ಅಗತ್ಯವಿದ್ದರೆ ನಾವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಮತ್ತು ಪ್ರಕರಣದ ಮಾಹಿತಿ ಪಡೆಯುತ್ತೇವೆ ಎಂದು ಕೋರ್ಟ್ ಹೇಳಿದೆ.
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ನರೂಲಾರ ಲಗೇಜ್ ತಪಾಸಣೆಗೆ ಮುಂದಾದಾಗ ಪೊಲೀಸರು ಅಧಿಕಾರಿಗಳು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ನರೂಲಾರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನರೂಲಾ ಅವರು ಸಹ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.
SCROLL FOR NEXT