ದೇಶ

ಕೊಲೆ ಪ್ರಕರಣ: ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಲಹಬಾದ್ ಹೈಕೋರ್ಟ್

Lingaraj Badiger
ಪ್ರಯಾಗ್ ರಾಜ್: 22 ವರ್ಷಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಐದು ಮಂದಿಯನ್ನು ಹಾಡುಹಗಲೇ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಹಮೀರ್ ಪುರ್ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಂಡೇಲ್ ಗೆ ಅಲಹಬಾದ್ ಹೈಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಿಜೆಪಿ ಶಾಸಕ ಚಂಡೇಲ್ ಹಾಗೂ ಇತರ ಆರೋಪಿಗಳಾದ ರಘುವೀರ್ ಸಿಂಗ್, ಅಶುತೋಷ್ ಸಿಂಗ್, ಸಾಹಿಬ್ ಸಿಂಗ್, ಭಾನ್ ಸಿಂಗ್, ಪ್ರದೀಪ್ ಸಿಂಗ್, ಉತ್ತಮ್ ಸಿಂಗ್ ಶ್ಯಾಮ್ ಸಿಂಗ್ ಹಾಗೂ ಶಾಸಕನ ಖಾಸಗಿ ಗನ್ ಮ್ಯಾನ್ ಗೂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಲ್ಲಿ ಹಾಜರಿದ್ದ ಹಮೀರ್ ಪುರ್ ವಿಧಾನಸಭಾ ಕ್ಷೇತ್ರವನ್ನು ಕಳೆದ ನಾಲ್ಕು ಅವಧಿಗಳಿಂದ ಪ್ರತಿನಿಧಿಸುತ್ತಿರುವ ಅಶೋಕ್ ಸಿಂಗ್ ಚಂಡೇಲ್ ಹಾಗೂ ಇತರ ತಪ್ಪಿತಸ್ಥರನ್ನು ನ್ಯಾಯಾಲಯ ತೀರ್ಪು ಪ್ರಕಟಿಸಿದ ಕೂಡಲೇ ಪೊಲೀಸರು ವಶಕ್ಕೆ ಪಡೆದುಕೊಂಡರು.
ಅಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ ರಾಜ್ಯ ಸರ್ಕಾರ ತೀರ್ಪಿನ ವಿರುದ್ದ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
1997ರ ಜನವರಿ 26 ರಂದು ಹಾಡು ಹಗಲೇ ಓರ್ವ ಅಪ್ರಾಪ್ತ ಸೇರಿದಂತೆ ಐವರನ್ನು ಕೊಲೆ ಮಾಡಿದ್ದ ಪ್ರಕರಣ ಇದಾಗಿದೆ.
ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ಡಿಕೆ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ  ರಾಜೀವ್ ಶುಕ್ಲಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಬಿಜೆಪಿ ಶಾಸಕ ಚಂಡೇಲ್ ಹಲವು ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ.
SCROLL FOR NEXT