ದೇಶ

ಶಾಪದಿಂದ ಕರ್ಕರೆ ಸಾವು ಹೇಳಿಕೆ: ಸಾಧ್ವಿ ಪ್ರಗ್ಯಾಗೆ ಐಪಿಎಸ್ ತರಾಟೆ, ಚುನಾವಣಾ ಆಯೋಗಕ್ಕೆ ದೂರು

Lingaraj Badiger
ಭೋಪಾಲ್: ಮುಂಬೈ ದಾಳಿಯಲ್ಲಿ ಹುತಾತ್ಮರಾದ  ಮಹಾರಾಷ್ಟ್ರ ಎ.ಟಿ.ಎಸ್‌. ಮುಖ್ಯಸ್ಥ ಹೇಮಂತ ಕರ್ಕರೆ ಅವರಿಗೆ ನಾನು ಶಾಪ ಹಾಕಿದ್ದೆ. ನನ್ನ ಶಾಪದಿಂದ ಹಾಗೂ ಅವರ ಕರ್ಮದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ 2008ರ ಮಾಲೆಗಾಂವ್‌ ನ್ಪೋಟ ಪ್ರಕರಣದ ಆರೋಪಿ, ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರನ್ನು ಐಪಿಎಸ್ ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಐಪಿಎಸ್ ಅಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದ್ದು, "ಅಶೋಕ್ ಚಕ್ರ ಪ್ರಶಸ್ತಿ ವಿಜೇತ ಶ್ರೀ ಹೆಮಾಂತ್ ಕರ್ಕರೆ ಅವರು ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಸಮವಸ್ತ್ರದಲ್ಲಿರುವ ಅಧಿಕಾರಿಯನ್ನು ಅವಮಾನ ಮಾಡಿದ ಅಭ್ಯರ್ಥಿಯ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮ ಹುತಾತ್ಮರ ತ್ಯಾಗವನ್ನು ಗೌರವಿಸಬೇಕು ಎಂದು ಒತ್ತಾಯಿಸುವುದಾಗಿ' ಐಪಿಎಸ್ ಅಧಿಕಾರಿಗಳ ಸಂಘ ಟ್ವೀಟ್ ಮಾಡಿದೆ.
ಇನ್ನು ಈ ಸಂಬಂಧ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಬಂದಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಮಧ್ಯ ಪ್ರದೇಶ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಪ್ರಗ್ಯಾ ಸಿಂಗ್ ಹೇಳಿಕೆಯನ್ನು ಎಎಪಿ ಮತ್ತು ಕಾಂಗ್ರೆಸ್ ಖಂಡಿಸಿದ್ದು, "ಹೇಮಂತ್ ಕರ್ಕರೆ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರು ದೇಶಕ್ಕಾಗಿ ತಮ್ಮ ಜೀವ ಕೊಟ್ಟಿದ್ದಾರೆ. ನಾವು ಅವರನ್ನು ಗೌರವಿಸಬೇಕು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರ ಎದುರಾಳಿಯಾಗಿ ಬಿಜೆಪಿಯಿಂದ ಕಣಕ್ಕಿಳಿದರುವ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರು ಈಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.
SCROLL FOR NEXT