ದೇಶ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ರಜನಿಕಾಂತ್

Lingaraj Badiger
ಚೆನ್ನೈ: ಅಭಿಮಾನಿಗಳಿಗೆ ನಿರಾಸೆಗೊಳಿಸದೆ, ಮುಂದಿನ ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸುವುದು ಖಚಿತ ಎಂದು ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಶುಕ್ರವಾರ ಹೇಳಿದ್ದಾರೆ.
ತಮ್ಮ ಹೊಸ 'ದರ್ಬಾರ್' ಚಲನಚಿತ್ರ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ವಿಧಾನಸಭೆಗೆ ಚುನಾವಣೆ ಯಾವುದೇ ಸಮಯದಲ್ಲಿ ಘೋಷಿಸಿದರೂ ತಾವು ರಚಿಸಲಿರುವ ಪಕ್ಷ ಎಲ್ಲ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದರು.
ರಾಜಕಾರಣಕ್ಕೆ ತಾವು ಪ್ರವೇಶಿಸುವುದಕ್ಕೆ ಉತ್ಸಾಹದಿಂದ ಕಾಯುತ್ತಿರುವ ಅಭಿಮಾನಿಗಳನ್ನು ನಿರಾಸೆ ಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 
ರಾಜ್ಯದಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಶೇ.71.87ರಷ್ಟು ಮತದಾನವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ರಜನಿಕಾಂತ್ ಬಣ್ಣಿಸಿದ್ದಾರೆ. 
ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೇ.23ರಂದು ಫಲಿತಾಂಶ ಹೊರಬಿದ್ದ ನಂತರ ಗೊತ್ತಾಗುತ್ತದೆ ಎಂದಿದ್ದಾರೆ. 
ಅರಿಯಲೂರ್ ನಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನ ಚುನಾವಣೆಗಳಲ್ಲಿ ನಡೆದಿದ್ದ ಘರ್ಷಣೆಗಳಿಗೆ ಹೋಲಿಸಿದರೆ, ಈ ಚುನಾವಣೆಗಳಲ್ಲಿ ಹಿಂಸಾಚಾರಗಳ ಪ್ರಮಾಣ ಕಡಿಮೆಯಾಗಿದೆ. ಚುನಾವಣಾ ಆಯೋಗ ಈ ಬಾರಿ ಉತ್ತಮ ಕೆಲಸ ಮಾಡಿದೆ ಎಂದರು.
2018ರ ಹೊಸ ವರ್ಷದ ದಿನದಂದು ರಜನಿಕಾಂತ್‌ ಅವರು ರಾಜಕೀಯ ಪ್ರವೇಶಿಸುವುದಾಗಿ ಪ್ರಕಟಿಸಿದ್ದರು. ಆದರೆ, ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಅವರು ಇದುವರೆಗೆ ಸ್ಥಾಪಿಸಿಲ್ಲ. 
ತಾವು ವಿಧಾನಸಭಾ ಚುನಾವಣೆಗಳಿಗಷ್ಟೇ ಗಮನ ಹರಿಸಿದ್ದು, ರಾಜ್ಯದ ಎಲ್ಲ 234 ಕ್ಷೇತ್ರಗಳಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ರಜನಿಕಾಂತ್ ಹೇಳಿದ್ದಾರೆ. 
ಬಿಜೆಪಿ ಬೆಂಬಲಿರಾಗಿ ಗುರುತಿಸಿಕೊಂಡಿರುವ ರಜನೀಕಾಂತ್‌, ಪ್ರಸಕ್ತ ಚುನಾವಣೆಯಲ್ಲೂ ಯಾವುದೇ ಪಕ್ಷಕ್ಕೆ ಬೆಂಬಲ ಸೂಚಿಸಿಲ್ಲ. ತಮ್ಮ ಹೆಸರನ್ನು ಚುನಾವಣೆಗಳಲ್ಲಿ ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಕರೆಯನ್ನೂ ಅವರು ನೀಡಿದ್ದರು.
SCROLL FOR NEXT