ದೇಶ

ನಿಮ್ಮ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ ಎಂದು ಕೇಳಿದ್ದಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

Sumana Upadhyaya
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.
ಚಿಕ್ಕವನಿದ್ದಾಗ ಗಣ್ಯ ವ್ಯಕ್ತಿಗಳ ಜೀವನಾಧಾರಿತ ಪುಸ್ತಕ ಓದುವ ಹವ್ಯಾಸ ನನಗಿತ್ತು.
ಸೈನಿಕರನ್ನು ನೋಡಿದರೆ ನಾನು ಕೂಡಾ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದೆ. ಸೇನೆಗೆ ಸೇರಿ ದಂಡನಾಯಕನಾಗಬೇಕೆಂಬ ಕನಸು ಕೂಡ ಇದ್ದಿತ್ತು. ನಾನು ಪ್ರಧಾನಿಯಾಗಬೇಕೆಂಬ ಯೋಚನೆ ಮಾಡಿರಲಿಲ್ಲ. ನಾನೇನು ಯೋಚಿಸಿರಲಿಲ್ಲವೋ ಆ ಸ್ಥಾನಕ್ಕೇರಿದ್ದೇನೆ. ಸುತ್ತಾಡುತ್ತಾ ಇಲ್ಲಿಗೆ ತಲುಪಿದ್ದೇನೆ ಎಂದರು.
ನಿಮ್ಮ ಅಕೌಂಟ್ ನಲ್ಲಿ ಎಷ್ಟು ಹಣವಿದೆ ಎಂದು ಅಕ್ಕಿ ಕೇಳಿದ್ದಕ್ಕೆ ನಾನು ಗುಜರಾತ್ ಸಿಎಂ ಆಗಿದ್ದಾಗ ನನ್ನ ಬಳಿ ಬ್ಯಾಂಕ್ ಅಕೌಂಟ್ ಇರಲಿಲ್ಲ. ಶಾಸಕನಾದ ಮೇಲೆ ಸಂಬಳ ಬರಲಾರಂಭಿಸಿತು. ಶಾಲೆಯಲ್ಲಿದ್ದಾಗ ದೇನಾ ಬ್ಯಾಂಕ್ ಸಿಬ್ಬಂದಿ ಬಂದು ಎಲ್ಲಾ ಮಕ್ಕಳಿಗೆ ಹಣ ಸಂಗ್ರಹಿಸುವ ಹುಂಡಿ ನೀಡಿ, ಇದರಲ್ಲಿ ಹಣ ಕೂಡಿಟ್ಟು ಬ್ಯಾಂಕ್ ನಲ್ಲಿ ಜಮೆ ಮಾಡಿ ಎಂದಿದ್ದರು. ಆದರೆ ನಮ್ಮ ಬಳಿ ಹುಂಡಿಗೆ ಹಾಕಲು ಹಣವಿರಬೇಕಲ್ಲವೇ? ಅಂದಿನಿಂದ ಅಕೌಂಟ್ ನಿಷ್ಕ್ರಿಯವಾಗಿ ಬಿದ್ದಿತ್ತು. ಸರ್ಕಾರದ ಪರವಾಗಿ ಒಂದು ಫ್ಲ್ಯಾಟ್ ಸಿಗುತ್ತದೆ, ಕಡಿಮೆ ಬೆಲೆಗೆ ಸಿಗುವ ಈ ಫ್ಲ್ಯಾಟ್ ನಾನು ನನ್ನ ಪಕ್ಷಕ್ಕೆ ನೀಡಿದೆ. ಆ ಫ್ಲ್ಯಾಟ್ ವಿಚಾರವಾಗಿ ಸುಪ್ರಿಂ ಕೋರ್ಟ್ ನಲ್ಲಿ ಇನ್ನೂ ಪ್ರಕರಣ ನಡೆಯುತ್ತಿದೆ, ಅದು ಕ್ಲಿಯರ್ ಆದ ಬಳಿಕ ಫ್ಲ್ಯಾಟ್ ಪಕ್ಷದ ಹೆಸರಿಗೆ ಮಾಡುತ್ತೇನೆ.
ಅವರು ಪ್ರಧಾನಿಯಾದ ಬಳಿಕ ಅವರ ವೇತನದಿಂದ ಬಂದ 21 ಲಕ್ಷ ರೂ.ಗಳನ್ನು ಡ್ರೈವರ್ ಗಳ ಮಕ್ಕಳಿಗೆ ಮೋದಿ ನೀಡಿದ್ದರು.
ಅಲ್ಲಾವುದ್ದಿನ್ ನ ಮಾಯಾ ದೀಪ ಸಿಕ್ಕರೆ ನೀವು ಯಾವ ವರ ಬೇಡುತ್ತೀರಿ ಎಂದು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, "ಹಾಗೊಮ್ಮೆ ನನಗೆ ಅಲ್ಲಾವುದ್ದಿನ್ ನ ದೀಪ ಸಿಕ್ಕರೆ, ಇಂದಿನ ತಲಮಾರಿನ ಶಿಕ್ಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಅಲ್ಲಾವುದ್ದಿನ್ ನ ಮಾಯಾದೀಪದ ಕತೆ ಹೇಳದಂತೆ ಮಾಡು ಎಂದು ಕೇಳುತ್ತೇನೆ. ಎಲ್ಲರು ಸ್ವಂತ ಪರಿಶ್ರಮದ ಮೂಲಕ ಮೇಲೆ ಬರಬೇಕು, ಇಂಥವುಗಳ ಭ್ರಮೆಯಲ್ಲಿ ಬದುಕಬಾರದು" ಎಂದರು.
ನನ್ನ ಜೀವನದ ಆರಂಭಿಕ ದಿನಗಳಲ್ಲೇ ಮನೆ ಬಿಟ್ಟು ಹೊರ ಹೋಗಿದ್ದರಿಂದ ಕುಟುಂಬದ ಬಂಧ ಕಳಚಿಕೊಂಡಿದೆ. ಒಂದು ನಿರ್ದಿಷ್ಟ ವಯಸ್ಸಿನ ಬಳಿಕ ಮನೆ ಬಿಟ್ಟು ಹೋಗೋದು ಬಹಳ ಕಷ್ಟ. ನಾನು ಎಳೆ ವಯಸ್ಸಿನಲ್ಲೇ ಮನೆ ಬಿಡದೆ, ಈಗ ಬಿಟ್ಟು ಬದುಕುವ ಸನ್ನಿವೇಶ ಎದುರಾಗಿದ್ದರೆ ನೋವಾಗುತ್ತಿತ್ತು. ಆದರೆ ನಾನು ಚಿಕ್ಕವನಿದ್ದಾಗಲೇ ಮನೆಬಿಟ್ಟು ಹೋದೆ. ಕುಟುಂಬ ಬಿಟ್ಟು ಬದುಕುವುದನ್ನು ರೂಢಿಸಿಕೊಂಡೆ. ಈಗ ಅದು ನನಗೆ ಅಭ್ಯಾಸವಾಗಿದೆ' ಎಂದು ಮೋದಿ ಹೇಳಿದರು.
SCROLL FOR NEXT