ದೇಶ

ಸಿಜೆಐ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ತನಿಖೆಗೆ ನ್ಯಾ. ಬೊಬ್ಡೆ ನೇತೃತ್ವದ ಆಂತರಿಕ ಸಮಿತಿ

Raghavendra Adiga
ನವದೆಹಲಿ: ಭಾರತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರ ಪೈಕಿ ಎರಡನೆಯವರಾದ ಜಸ್ಟೀಸ್ ಎಸ್ ಎ.ಬೊಬ್ಡೆ ನೇತೃತ್ವದ ಮೂರು ಸದಸ್ಯರ ಆಂತರಿಕ ಸಮಿತಿಯನ್ನು ಮಂಗಳವಾರ ರಚಿಸಲಾಗಿದೆ.
ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಈ ತನಿಖಾ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಬೊಬ್ಡೆ ಪತ್ರ ಬರೆಯುವ ಮೂಲಕ ಈ ಇಬ್ಬರೂ ನ್ಯಾಯಾಧೀಶರನ್ನು ಸಮಿತಿಯ ಸದಸ್ಯರಾಗಲು ವಿನಂತಿಸಿದ್ದಾರೆ.
"ರಮಣ ಅವರು ಹಿರಿತನದ ಆಧಾರದಲ್ಲಿ ನನ್ನ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾನರ್ಜಿಯವರು ಮಹಿಳಾ ನ್ಯಾಯಾಧೀಶರಾದ ಕಾರಣ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ" ಬೊಬ್ಡೆ ಹೇಳಿದ್ದಾರೆ.
ಸಿಜೆಐ ನಿವಾಸದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಮಹಿಳಾ ಉದ್ಯೋಗಿ ಆರೋಪಿಸಿದ್ದು ಮಹಿಳೆಯು ಈ ಕುರಿತು  ಸರ್ವೋಚ್ಚ ನ್ಯಾಯಾಲಯದ ಎಲ್ಲ 22 ನ್ಯಾಯಾಧೀಶರಿಗೆ ಪ್ರಮಾಣೀಕರಿಸಿದ ಅಫಿಡವಿಟ್ ಗಳನ್ನು ಸಲ್ಲಿಸಿದ್ದರು. ಈ ಕುರಿತಂತೆ ವಿವರವಾದ ತನಿಖೆಗಾಗಿ ಈಗ ಈ ಮೂವರು ಸದಸ್ಯರ ಆಂತರಿಕ ಸಮಿತಿ ರಚನೆಯಾಗಿದೆ.
ಆಂತರಿಕ ತನಿಖಾ ಸಮಿತಿ ರಚಿಸಿದ ನಂತರ, ನ್ಯಾಯಮೂರ್ತಿ ಬೊಬ್ಡೆ  ದೂರುದಾರರಿಗೆ ನೋಟೀಸ್ ನೀಡಿದ್ದಾರೆ.ಶುಕ್ರವಾರ ಮೊದಲ ವಿಚಾರಣೆಯನ್ನು ನಿಗದಿಪಡಿಸಲಾಗಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಕೂಡ ದಾಖಲೆ ಒದಗಿಸಬೇಕೆಂದು ಕೇಳಲಾಗಿದೆ.
SCROLL FOR NEXT