ದೇಶ

ಜಾರ್ಖಂಡ್: ಮಾವೋವಾದಿಗಳ ಅಟ್ಟಹಾಸ; ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸ್ಫೋಟ, ಯಂತ್ರೋಪಕರಣಗಳಿಗೆ ಬೆಂಕಿ

Sumana Upadhyaya
ಡಾಲ್ಟೊಂಗಂಜ್(ಜಾರ್ಖಂಡ್): ಪಲಮು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ 72 ಗಂಟೆ ಮೊದಲು ಸಿಪಿಐ ಮಾವೋವಾದಿಗಳು ಬಾಂಬ್ ಸ್ಫೋಟಿಸಿ ಹರಿಹರ್ಗುಂಜ್ ನ ಬಿಜೆಪಿ ಚುನಾವಣಾ ಕಚೇರಿಯನ್ನು ನಾಶಪಡಿಸಿದ್ದಾರೆ. ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಳಸುತ್ತಿದ್ದ ಉಪಕರಣಗಳಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದ್ದಾರೆ.
ಕಳೆದ ಮಧ್ಯರಾತ್ರಿ ಹರಿಹರಗುಂಜ್ ಬಸ್ ನಿಲ್ದಾಣದ ಹತ್ತಿರವಿರುವ ಬಿಜೆಪಿ ಚುನಾವಣಾ ಕಚೇರಿ ಸಮೀಪ ಮಾವೋವಾದಿಗಳು ಬಾಂಬ್ ಸ್ಫೋಟಗೊಳಿಸಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೊಲೀಸ್ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿದ್ದು ಘಟನೆಯಾದ ಕೂಡಲೇ ರಾತ್ರಿ ಹೊತ್ತು ಮತ್ತೆ ಮಾವೋವಾದಿಗಳು ಹೊಂಚುದಾಳಿ ಮಾಡಬಹುದು ಎಂಬ ಸಂಶಯದಿಂದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಲಿಲ್ಲ.
ಮಾವೋವಾದಿಗಳು ಬಾಂಬ್ ದಾಳಿ ನಡೆಸಿ ಸ್ಥಳವನ್ನು ತೊರೆಯುವ ಮೊದಲು ಘೋಷಣೆಗಳನ್ನು ಕೂಗಿದ್ದಾರೆ. ಇದು ಜಾರ್ಖಂಡ್ ಮತ್ತು ಬಿಹಾರ ಗಡಿಭಾಗದಲ್ಲಿದೆ. ನಂತರ ಮಾವೋವಾದಿಗಳು ಹರಿಹರಗುಂಜ್ ಪೊಲೀಸ್ ಠಾಣೆಯ ಹತ್ತಿರವಿರುವ ತುರಿ ಗ್ರಾಮಕ್ಕೆ ತೆರಳಿ ಜನರೇಟರ್, ಮಿಕ್ಸರ್ ಯಂತ್ರ ಮತ್ತು ಕಾರ್ಮಿಕರು ಇರುತ್ತಿದ್ದ ಗುಡಿಸಲು ಮೇಲೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಬಟನೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು.
ಕರಪತ್ರಗಳನ್ನು ಎಸೆದು ಹೋಗಿರುವ ಮಾವೋವಾದಿಗಳು ಚುನಾವಣೆಯನ್ನು ಬಹಿಷ್ಕರಿಸುವಂತೆ ಜನರಲ್ಲಿ ಕೇಳಿದ್ದಾರೆ. ಈ ಮಧ್ಯೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ.
SCROLL FOR NEXT