ಗೋಪಾಲ್ ಗಂಜ್: ಭೂಮಿಯಲ್ಲಿರುವ ಯಾವುದೇ ಶಕ್ತಿಗೆ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಮೀಸಲಾತಿ ಕುರಿತು ಹರಡುತ್ತಿರುವ ಗೊಂದಲದ ಬಗ್ಗೆ ಎಚ್ಚರಿಕೆ ಇಂದ ಇರಿ ಎಂದು ಜನತೆಗೆ ನಿತೀಶ್ ಕುಮಾರ್ ಕರೆ ನೀಡಿದ್ದಾರೆ. ಮಹಾಘಟಬಂಧನದಲ್ಲಿ ಗುರುತಿಸಿಕೊಂಡಿರುವ ನಾಯಕರಾದ ಆರ್ ಜೆಡಿಯ ತೇಜಸ್ವಿ ಯಾದವ್, ಆರ್ ಎಲ್ಎಸ್ ಪಿ ಮುಖ್ಯಸ್ಥರಾದ ಉಪೇಂದ್ರ ಕುಶ್ವಾಹ, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಮುಂದುವರೆಯುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಎನ್ ಡಿಎಯಲ್ಲಿ ಗುರುತಿಸಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಭೂಮಿಯಲ್ಲಿರುವ ಯಾವುದೇ ಶಕ್ತಿ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ, ಅನಗತ್ಯ ಗೊಂದಲಗಳಿಗೆ ಕಿವಿಗೊಡಬೇಡಿ ಎಂದು ಜನತೆಗೆ ಕರೆ ನೀಡಿದ್ದಾರೆ. ಪಂಚಾಯತ್ ಚುನಾವಣೆಗಳಲ್ಲಿ ನಾನು ಮೀಸಲಾತಿಯನ್ನು ಪರಿಚಯಿಸಿದೆ, ನರೇಂದ್ರ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೆ ಶೇ.10 ರಷ್ಟು ಮೀಸಲಾತಿಯನ್ನು ನೀಡಿದರು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.