ದೇಶ

10 ಸಾವಿರ ಸೈನಿಕರ ನಿಯೋಜನೆಯಾದ ಒಂದೇ ವಾರದಲ್ಲಿ ಮತ್ತೆ ಕಾಶ್ಮೀರದಲ್ಲಿ 28 ಸಾವಿರ ಸೈನಿಕರ ನಿಯೋಜನೆ!

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಅಚ್ಚರಿ ನಡೆಯನ್ನಿರಿಸಿದ್ದು, 10 ಸಾವಿರ ಸೈನಿಕರ ನಿಯೋಜಿಸಿದ್ದ ಕೇಂದ್ರಸರ್ಕಾರದ ನಡೆ ಇನ್ನೂ ಚರ್ಚೆಗೀಡಾಗುತ್ತಿರುವ ಹೊತ್ತಿನಲ್ಲೇ ಕೇವಲ ಒಂದೇ ವಾರದ ಅವಧಿಯಲ್ಲಿ ಮತ್ತೆ 28 ಸಾವಿರ ಸೈನಿಕರ ನಿಯೋಜನೆ ಮಾಡಿದೆ.
ವಾರಗಳ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 2 ದಿನಗಳ ಕಾಶ್ಮೀರ ಭೇಟಿಯಲ್ಲಿದ್ದರು. ದೋವಲ್ ಹಿಂದಿರುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಕುತೂಹಲ ಕೆರಳಿಸಿದೆ. ಇನ್ನು ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 370 ಮತ್ತು 35ಎ ಕುರಿತಂತೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಈ ನಡೆ ಅಚ್ಚರಿ ಮೂಡಿಸಿದೆ. ವಾರದ ಹಿಂದೆಯಷ್ಟೇ 10 ಸಾವಿರ ಅರೆಸೇನಾ ಪಡೆಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಮತ್ತೆ ಕಾಶ್ಮೀರಕ್ಕೆ ಮತ್ತೆ 28 ಸಾವಿರ ಸೈನಿಕರನ್ನು ಕಳುಹಿಸಲಾಗಿದೆ. 
ಆದರೆ ಇದಕ್ಕೆ ಯಾವುದೇ ಕಾರಣಗಳನ್ನು ಸೇನೆಯಾಗಲಿ, ಸರ್ಕಾರವಾಗಲಿ ನೀಡಿಲ್ಲ. ಮೂಲಗಳ ಪ್ರಕಾರ ಅಮರನಾಥ ಯಾತ್ರಾರ್ಥಿಗಳ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಆದರೂ ಇಷ್ಟೊಂದು ಸೈನಿಕರನ್ನುಅಮರನಾಥ ಯಾತ್ರೆಗೆ ನಿಯೋಜಿಸಿದ ಉದಾಹರಣೆಗಳೇ ಇಲ್ಲ ಎಂದು ತಿಳಿದುಬಂದಿದೆ. ಇನ್ನು ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.
ಇದೇ ವಿಚಾರವಾಗಿ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕರು, ಉತ್ತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೂ ಕೂಡ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಅಷ್ಟು ಮಾತ್ರವಲ್ಲದೆ ಇಂದು ಮತ್ತು ನಾಳೆ ಅಂದರೆ 2 ದಿನಗಳ ಕಾಲ ಕಾಶ್ಮೀರದಲ್ಲೇ ಉಳಿದು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
SCROLL FOR NEXT