ದೇಶ

ಕಾಶ್ಮೀರದಲ್ಲಿ ಹೈ ಅಲರ್ಟ್; ಹೆಚ್ಚುವರಿ ಭದ್ರತೆ ನಿಯೋಜನೆ: ಗೃಹ ಇಲಾಖೆ ಹೇಳಿದ್ದೇನು?

Srinivasamurthy VN
ನವದೆಹಲಿ: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹಿನ್ನಲೆಯಲ್ಲಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೈನಿಕರನ್ನು ರವಾನೆ ಮಾಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕಳೆದವಾರವಷ್ಟೇ ಕಣಿವೆ ರಾಜ್ಯಕ್ಕೆ 10 ಸಾವಿರ ಸೈನಿಕರನ್ನು ನಿಯೋಜಿಸಲಾಗಿತ್ತು. ಈ ಬೆಳವಣಿಗೆಯ ಕೇವಲ ಒಂದೇ ವಾರದ ಅವಧಿಯೊಳಗೆ ಮತ್ತೆ ಸುಮಾರು 28 ಸಾವಿರ ಸೈನಿಕರನ್ನು ಗಡಿಗೆ ನಿಯೋಜಿಸಿದೆ. ಈ ಸಂಬಂಧ ಸ್ವತಃ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಕೆಲ ಆಂತರಿಕ ವಿಚಾರವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆಯೇ ಕಾಶ್ಮೀರಕ್ಕೆ ಹೆಚ್ಚುವರಿ ಸೈನಿಕರ ನಿಯೋಜನೆಗೆ ಸೇನೆ ಅನುಮತಿ ಕೋರಿತ್ತು. ಹೀಗಾಗಿ ಇದೀಗ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದು ದಿಢೀರ್ ನಿರ್ಧಾರವಲ್ಲ ಎಂದು ಸ್ಪಷ್ಟನೆ ನೀಡಿದೆ.
ಅಂತೆಯೇ ಸೈನಿಕರ ರವಾನೆಗಾಗಿ ವಾಯುಸೇನೆಯ ಸಿ-17 ಹೆವಿ ಲಿಫ್ಟ್ ಯುದ್ಧ ವಿಮಾನವನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಹಾಲಿ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಹೇಳಿದೆ. ಆದರೆ ಆ ಪರಿಸ್ಥಿತಿ ಕುರಿತು ಯಾವುದೇ ರೀತಿಯ ಮಾಹಿತಿ ನೀಡಲು ಗೃಹ ಸಚಿವಾಲಯ ಮುಂದಾಗಿಲ್ಲ.
ಇದು ಸಂಪೂರ್ಣ ಆಂತರಿಕ ವಿಚಾರವಾಗಿದ್ದು, ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ. ಸೇನೆಯಲ್ಲಿ ಸಿಬ್ಬಿಂದಿಗಳ ರವಾನೆ, ನಿಯೋಜನೆ, ಮತ್ತೆ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದು ಸರ್ವೆ ಸಾಮಾನ್ಯ ಪ್ರಕ್ರಿಯೆ ಎಂದಷ್ಟೇ ಹೇಳಿದೆ. 
SCROLL FOR NEXT