ದೇಶ

ಉಪಯೋಗವಿಲ್ಲದ 58 ಹಳೆಯ ಕಾನೂನುಗಳನ್ನು ಹಿಂಪಡೆಯಲು ಸಂಸತ್ತು ಸಮ್ಮತಿ!

Vishwanath S
ನವದೆಹಲಿ: ದೇಶದಲ್ಲಿ ಉಪಯೋಗವಿಲ್ಲದ ಹಾಗೂ ಅನುಪಯೋಗಿಯಾಗಿರುವ 58 ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ. 
ಕೇಂದ್ರ ಕಾನೂನು ವ್ಯವಹಾರಗಳ ಸಚಿವ ರವಿ ಶಂಕರ್ ಪ್ರಸಾದ್ , 'ಹಿಂಪಡೆಯುವ ಹಾಗೂ ತಿದ್ದುಪಡಿ ಮಸೂದೆ 2019' ಅನ್ನು ರಾಜ್ಯಸಭೆಯಲ್ಲಿ ಮಂಡಿಸಿ, ದೇಶದಲ್ಲಿ ಅನುಪಯೋಗಿ ಕಾನೂನುಗಳ ನಿಯಮಿತ ಪರಿಶೀಲನೆಗೆ ನಿರ್ಧಿಷ್ಟ ಕಾರ್ಯವಿಧಾನ ಅಳವಡಿಕೆಯ ಅಗತ್ಯವಿದೆ ಎಂದರು.  
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ 1,428 ಹಳೆಯ ನಿಯಮಗಳನ್ನು ಹಿಂಪಡೆದಿದೆ. ಹಳೆಯ ಕಾನೂನುಗಳನ್ನು ಹಿಂಪಡೆಯುವುದು ಉತ್ತಮ ಆಡಳಿತದ ಭಾಗವಾಗಬೇಕು ಎಂದರು. 
ಸಾಕಷ್ಟು ಕಾನೂನುಗಳು ಬ್ರಿಟೀಷ್ ಕಾಲದಿಂದಲೂ ಜಾರಿಯಲ್ಲಿವೆ ಎಂದು ಅವರು, ಈ ಚರ್ಚೆಯಲ್ಲಿ ಪಾಲ್ಗೊಂಡು ಹಲವು ಉಪಯುಕ್ತ ಸಲಹೆಗಳನ್ನು ನೀಡಿದ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು. 
ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಯು ಕಹಕಷನ್ ಪರ್ವನ್, ಸರ್ಕಾರದ ನಡೆಯನ್ನು ಸ್ವಚ್ಛತಾ ಅಭಿಯಾನಕ್ಕೆ ಹೋಲಿಸಿದರು. ನಾವು ಸ್ವಚ್ಛತಾ ಅಭಿಯಾನದ ಮೂಲಕ ಕಸವನ್ನು ತೆಗೆದಂತೆ, ಹಳೆಯ, ಉಪಯೋಗವಿಲ್ಲದ ಕಾನೂನುಗಳನ್ನು ಹೊರತೆಗೆಯಬೇಕು ಎಂದರು. 
ಈ ಮಸೂದೆಯ ಚರ್ಚೆ ವೇಳೆ ಯಾವುದೇ ಗದ್ದಲ, ವಾದ ವಿವಾದಗಳು ನಡೆಯದ ಹಿನ್ನೆಲೆಯಲ್ಲಿ ಬಿಜೆಡಿಯ ಪ್ರಶಾಂತ ನಂದ ಅವರು ಇದನ್ನು 'ಮುಗ್ಧ ಮಸೂದೆ' ಎಂದು ಬಣ್ಣಿಸಿದರು. ಜೊತೆಗೆ, ಸಚಿವರು ಛಾಯಾಗ್ರಾಹಕ ಕಾಯ್ದೆಯತ್ತಲೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. 
ಈ ಮಸೂದೆಗೆ ಪ್ರಮುಖ ವಿಪಕ್ಷ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಅನುಮೋದನೆ ನೀಡಿದವು. ಲೋಕಸಭೆಯಲ್ಲಿ ಈ ಮಸೂದೆಗೆ ಜುಲೈ 29ರಂದು ಅನುಮೋದನೆ ದೊರೆತಿತ್ತು.
SCROLL FOR NEXT