ದೇಶ

ಕಾಶ್ಮೀರದಲ್ಲಿ ಉಗ್ರರ ಬೆದರಿಕೆ: 'ಮಚೈಲ್ ಮಾತಾ ಯಾತ್ರೆ' ಸ್ಥಗಿತ

Sumana Upadhyaya
ಜಮ್ಮು: ಭದ್ರತೆ ಕೊರತೆ ಕಾರಣಗಳಿಂದ ಜಮ್ಮು-ಕಾಶ್ಮೀರದ ಕಿಶ್ತ್ವಾರಾ ಜಿಲ್ಲೆಯಲ್ಲಿನ 43 ದಿನಗಳ 'ಮಚೈಲ್ ಮಾತಾ ಯಾತ್ರೆ'ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 
ಯಾತ್ರೆ ಆರಂಭಿಸದಿರುವಂತೆ ಮತ್ತು ಈಗಾಗಲೇ ಯಾತ್ರೆ ಆರಂಭಿಸಿ ಮಧ್ಯದಲ್ಲಿರುವವರು ಕೂಡಲೇ ಹಿಂತಿರುಗಿ ಬರುವಂತೆ ಅಧಿಕಾರಿಗಳು ಯಾತ್ರಿಕರಿಗೆ ತಿಳಿಸಿದ್ದಾರೆ.
ಭದ್ರತೆ ಕಾರಣಗಳಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿಶ್ತ್ವಾರ ಜಿಲ್ಲಾಧಿಕಾರಿ ಅಂಗ್ರೇಜ್ ಸಿಂಗ್ ರಾಣಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಜುಲೈ 25ರಂದು ಯಾತ್ರೆ ಆರಂಭವಾಗಿದ್ದು ಸೆಪ್ಟೆಂಬರ್ 5ರಂದು ಮುಕ್ತಾಯಗೊಳ್ಳಲಿತ್ತು.
30 ಕಿ.ಮೀ ಉದ್ದದ ಕಿರಿದು ಮತ್ತು ಕಠಿಣವಾದ ಮಾರ್ಗವನ್ನು ಚಾರಣ ಮಾಡಿದ ನಂತರ ಕಿಶ್ತ್ವಾರ್ ನ ಮಚೈಲ್ ಗ್ರಾಮದಲ್ಲಿರುವ ದುರ್ಗಾ ದೇವಿಯ ಪವಿತ್ರ ದೇಗುಲದಲ್ಲಿ ಯಾತ್ರೆ ಮಾಡಿ ನೀಲಮಣಿ ಗಣಿಗಳಿಗೆ ಹೆಸರುವಾಸಿಯಾದ ಸುಂದರವಾದ ಪಡ್ಡಾರ್ ಕಣಿವೆಯನ್ನು ಭೇಟಿ ಮಾಡಲೆಂದೇ ಪ್ರತಿವರ್ಷ ದೇಶದ ಹಲವು ಭಾಗಗಳಿಂದ ಇಲ್ಲಿಗೆ ಸಾವಿರಾರು ಯಾತ್ರಿಕರು ಬರುತ್ತಾರೆ. 
ದಶಕದ ಹಿಂದೆ ಭಯೋತ್ಪಾದನೆ ಮುಕ್ತ ಜಿಲ್ಲೆಯೆಂದು ಘೋಷಣೆಯಾಗಿದ್ದ ಕಿಶ್ತ್ವಾರದಲ್ಲಿ ಕಳೆದ ವರ್ಷ ನವೆಂಬರ್ 1ರಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಅವರ ಸೋದರ ಅಜೀತ್ ಪರಿಹಾರ್ ಅವರ ಕೊಲೆಯಾದ ನಂತರ ತೀವ್ರ ಗಲಭೆ, ಹಿಂಸಾಚಾರವುಂಟಾಗಿತ್ತು. ನಂತರ ಈ ವರ್ಷ ಏಪ್ರಿಲ್ 9ರಂದು ಆರ್ ಎಸ್ಎಸ್ ಹಿರಿಯ ನಾಯಕ ಚಂದರ್ ಕಾಂತ್ ಶರ್ಮ ಮತ್ತು ಅವರ ಭದ್ರತಾ ಸಿಬ್ಬಂದಿಯನ್ನು ಆರೋಗ್ಯ ಕೇಂದ್ರವೊಂದರ ಒಳಗೆ ಹತ್ಯೆಗೈಯಲಾಗಿತ್ತು. 
ಇದೇ ರೀತಿ ಭದ್ರತೆ ಕಾರಣಗಳಿಂದ ವಾರ್ಷಿಕ ಅಮರನಾಥ ಯಾತ್ರೆಯನ್ನು ಕೂಡ ಈಗಾಗಲೇ ಸ್ಥಗಿತಗೊಳಿಸಲಾಗಿದೆ. 
SCROLL FOR NEXT