ದೇಶ

ಬಿಜೆಪಿಯವರು ಕಟ್ಟಿದ್ದನ್ನು ಧ್ವಂಸ ಮಾಡ್ತಾರೆ, ಕಟ್ಟುವ ಬುದ್ದಿ ಇಲ್ಲ: ರಾಹುಲ್ ಗಾಂಧಿ ವಾಗ್ದಾಳಿ

Vishwanath S
ನವದೆಹಲಿ: ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದ್ದು ದಶಕಗಳಿಂದ ನಿರ್ಮಿಸಲ್ಪಟ್ಟಿದ್ದ ಭದ್ರ, ಉತ್ತಮ ವ್ಯವಸ್ಥೆಯನ್ನು ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಳು ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಹೊಸದಾಗಿ ಏನನ್ನೂ ಕಟ್ಟಲಿಲ್ಲ, ಬದಲಾಗಿ ಕಳೆದ ಹಲವು ದಶಕಗಳಿಂದ ಕಠಿಣ ಪರಿಶ್ರಮದಿಂದ ಮಾತ್ರ ರೂಪಿಸಿದ್ದ ಅಡಿಪಾಯದ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಅವರು ಟ್ವೀಟ್ ಮೂಲಕ ದೂರಿದ್ದಾರೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಸೇರಿದಂತೆ ಎಂಟು ಪ್ರಮಖ ಆದ್ಯತಾ ವಲಯಗಳ ಪ್ರಗತಿ ದರ ಈ ವರ್ಷದ ಜೂನ್ ನಲ್ಲಿ ಶೇಕಡಾ 0.2ಕ್ಕೆ ಕುಸಿದಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ಲಾರ್ಸೆನ್ ಮತ್ತು ಟೌಬ್ರೊ (ಎಲ್&ಟಿ) ಅಧ್ಯಕ್ಷ ಎ ಎಮ್ ನಾಯಕ್ ಅವರು ದೇಶದ ಆರ್ಥಿಕತೆಯ ಬಗ್ಗೆ ಮಾಡಿರುವ ಟೀಕೆ, ಆರ್ಥಿಕತೆಯ ಮಂದಗತಿ ತೋರುವ ಮಾಧ್ಯಮ ವರದಿಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆ ಇಲಾಖೆ ಮೂರು ಲಕ್ಷ ಉದ್ಯೋಗ ಕಡಿತ ಮಾಡುವ ಆಲೋಚನೆ, ಆಟೋಮೊಬೈಲ್ ವಿಭಾಗದಲ್ಲಿ ಜುಲೈ ಮಾರಾಟದ ಕುಸಿತ ಮತ್ತು ಬಿಎಸ್ಎನ್ಎಲ್, ಎಂಟಿಎನ್ಎಲ್ 1.98 ಲಕ್ಷ ಉದ್ಯೋಗಿಗಳಿಗೆ ವೇತನ ಪಾವತಿಸಲು ಆಗದ ರೀತಿಯಲ್ಲಿ 'ಆರ್ಥಿಕತೆ ಹಳಿ ತಪ್ಪಿದೆ' ಎಂದು ಅವರು ದೂರಿದ್ದಾರೆ. 
ಆರ್ಥಿಕತೆ ಪೂರ್ಣ ಹಳಿ ತಪ್ಪಿದೆ ಮತ್ತು ಸುರಂಗದ ಕೊನೆಯಲ್ಲಿ ಯಾವ ಬೆಳಕು ಕಾಣುತ್ತಿಲ್ಲ. ಆದರೆ ನಿಮ್ಮ ಅಸಮರ್ಥ ಹಣಕಾಸು ಸಚಿವರು ಬೆಳಕು ಇದೆ ಎಂದು ಹೇಳಿ, ಭ್ರಮೆ ಹುಟ್ಟಿಸುತ್ತಿದ್ದಾರೆ. ಆದರೆ ಆರ್ಥಿಕತೆ ಅಧೋಗತಿಗೆ ಇಳಿದಿದ್ದು, ಚೇತರಿಕೆಯ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಗಾಂಧಿ ವಾಗ್ದಾಳಿ ಮಾಡಿದ್ದಾರೆ.
SCROLL FOR NEXT