ದೇಶ

ಉನ್ನಾವ್ ಪ್ರಕರಣ: ಲಾರಿ ಚಾಲಕ, ಕ್ಲೀನರ್ ಸಿಬಿಐ ವಶಕ್ಕೆ, ನಂಬರ್ ಪ್ಲೇಟ್ ಗೆ ಕಪ್ಪು ಗ್ರೀಸ್ ಬಳಿದ ಮಾಲೀಕ

Lingaraj Badiger
ಉನ್ನಾವ್: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಆಶಿಶ್ ಕುಮಾರ್ ಪಾಲ್ ಹಾಗೂ ಕ್ಲೀನರ್ ಮೋಹನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಲಾಗಿದೆ.
ಇಬ್ಬರು ಆರೋಪಿಗಳನ್ನು ಏಳು ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ವಿಶೇಷ ನ್ಯಾಯಾಧೀಶೆ ಅನುರಾಧಾ ಶುಕ್ಲಾ ಅವರು ಒಂದು ದಿನ ಮಾತ್ರ ಸಿಬಿಐ ವಶಕ್ಕೆ ನೀಡಿ ಆದೇಶಿದ್ದಾರೆ.
ಜುಲೈ 28ರಂದು ರಾಯ್ ಬರೇಲಿ ಜಿಲ್ಲೆಯಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲ ಹಾಗೂ ಇಬ್ಬರು ಸಂಬಂಧಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಅತ್ಯಾಚಾರ ಸಂತ್ರಸ್ತೆ ಹಾಗೂ ವಕೀಲ ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಈ ಮಧ್ಯೆ ಕಾರಿಗೆ ಡಿಕ್ಕೆ ಹೊಡೆದ ಲಾರಿಯ ಮಾಲೀಕ ಹಾಗೂ ವಾಹನಕ್ಕೆ ಫೈನಾನ್ಸ್ ಮಾಡಿದ ಕಾನ್ಪುರ್ ಮೂಲದ ಕಂಪನಿ ವಿಭಿನ್ನ ಹೇಳಿಕೆ ನೀಡಿದ್ದು, ಲಾರಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ.
ಅಪಘಾತ ನಡೆದ ಸಂದರ್ಭದಲ್ಲಿ ಟ್ರಕ್ ನ ನಂಬರ್ ಪ್ಲೇಟ್ ಅನ್ನು ಗ್ರೀಸ್ ನಿಂದ ಉಜ್ಜಿರುವುದು ಕಂಡುಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಾರಿ ಮಾಲೀಕ, ತಾನು ಸಾಲದ ಕಂತನ್ನು ಕಟ್ಟಲು ವಿಫಲವಾಗಿದ್ದು, ಹಣಕಾಸು ಕಂಪನಿಯ ಸಿಬ್ಬಂದಿಯ ಕಣ್ಣುತಪ್ಪಿಸಲು ಉದ್ದೇಶಪೂರ್ವಕವಾಗಿ ನಂಬರ್ ಪ್ಲೇಟ್ ಗೆ ಗ್ರೀಸ್ ಹಾಕಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಕಂತು ಕಟ್ಟುವಂತೆ ತಾನು ಯಾರ ಮೇಲೂ ಒತ್ತಡ ಹೇರಿಲ್ಲ. ಅವರು ಕಂತುಗಳನ್ನು ತಪ್ಪಿಸಿದ್ದಾರೆ. ಆದರೂ ಅರ್ಧ ಕಂತುಗಳನ್ನು ಪಾವತಿಸಿದ್ದಾರೆ ಎಂದು ಕಂಪನಿಯ ಏಜೆಂಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
SCROLL FOR NEXT