ದೇಶ

ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ; ಸಿಂಧಿಯಾ ಬೆಂಬಲ; ಕಾಂಗ್ರೆಸ್ ನಲ್ಲೇ ಬಿರುಕು!

Srinivas Rao BV
ನವದೆಹಲಿ: ಜಮ್ಮು-ಕಾಶ್ಮೀರ, ಲಡಾಕ್ ಪ್ರದೇಶಗಳಿಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವ ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಕಾನೂನಾಗಿ ಜಾರಿಗೊಂಡಿದೆ. 
ಆ.06 ರ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಮಸೂದೆ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕರ ಆಕ್ಷೇಪಗಳಿಗೆ ಸಮರ್ಥ  ಉತ್ತರ ನೀಡಿದರು. ಈ ನಡುವೆ ಲೋಕಸಭೆಯಲ್ಲಿ ಸರ್ಕಾರದ ನಡೆಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಅಧಿರಂಜನ್ ಚೌಧರಿ ವಿವಾದ ಉಂಟು ಮಾಡಿದರು. ಸುಧೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದ್ದು, ಕಾನೂನಾಗಿ ಜಾರಿಯಾಗಿದೆ. ಆ.05 ರ ಕಲಾಪದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. 
ಮಸೂದೆ ಸಂಬಂಧ ಕಾಂಗ್ರೆಸ್ ನಲ್ಲೇ ಒಡಕು 
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗತೊಡಗಿದ್ದು, ರಾಜ್ಯಸಭೆಯಲ್ಲಿ ವಿಪಕ್ಷಗಳ ನಡುವೆಯೇ ಒಡಕು ಮೂಡಿದರೆ, ಲೋಕಸಭೆಯಲ್ಲಿ ಕಾಂಗ್ರೆಸ್  ನಾಯಕರಲ್ಲೇ ಒಡಕು ಕಾಣಿಸಿಕೊಂಡಿದೆ. 
ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಟ್ವೀಟ್ ಮಾಡಿದ ಕಾಂಗ್ರೆಸ್ ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಯನ್ನು ನಾನು ಬೆಂಬಲಿಸುತ್ತೇನೆ, ಸಾಂವಿಧಾನಿಕ ಪ್ರಕ್ರಿಯೆ ಮೂಲಕ ಇದನ್ನು ಮಾಡಿದ್ದರೆ ಮತ್ತಷ್ಟು ಸೂಕ್ತವಾಗಿರುತ್ತಿತ್ತು. ಆಗ ಯಾವುದೇ ಆಕ್ಷೇಪಗಳಿಗೆ ಜಾಗವಿರುತ್ತಿರಲಿಲ್ಲ. ಆದರೂ ಕೇಂದ್ರ ಸರ್ಕಾರದ ನಡೆ ದೇಶದ ಹಿತಾಸಕ್ತಿಗೆ ಅನುಗುಣವಾಗಿರುವುದರಿಂದ ಈ ಮಸೂದೆಯನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.   
370 ರದ್ದು ಮಾಡಿದ್ದಕ್ಕೆ ಇತಿಹಾಸ ಮೋದಿಯನ್ನು ಸ್ಮರಿಸಲಿದೆ
ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ, ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದಕ್ಕಾಗಿ ಇತಿಹಾಸ  ಮೋದಿಯನ್ನು ಸ್ಮರಿಸಲಿದೆ ಎಂದು ಹೇಳಿದ್ದಾರೆ.   
SCROLL FOR NEXT