ದೇಶ

ಸುಷ್ಮಾ ಸ್ವರಾಜ್ ಪ್ರಾಣ ಉಳಿಸಲು ಸತತ 70 ನಿಮಿಷಗಳ ಕಾಲ ಯತ್ನಿಸಿದ್ದ ವೈದ್ಯರು, ಆದರೂ ಫಲಿಸಲಿಲ್ಲ!

Srinivas Rao BV
ನವದೆಹಲಿ: ಅತ್ತ ಲೋಕಸಭೆಯಲ್ಲಿ ಜಮ್ಮುಕಾಶ್ಮೀರಪುನಾರಚನಾ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಇತ್ತ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಆರೋಗ್ಯದಲ್ಲಿ ವ್ಯತ್ಯಯವಾಗುವ ಸಣ್ಣ ಸುಳಿವೂ ಇರಲಿಲ್ಲ. ಆದರೆ ರಾತ್ರಿ 10:50 ರವೇಳೆಗೆ ಎಲ್ಲವೂ ಮುಗಿದು ಹೋಗಿತ್ತು. ಭಾರತ ತನ್ನ ನೆಚ್ಚಿನ ನಾಯಕಿಯನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿತ್ತು! 
ಜಮ್ಮು-ಕಾಶ್ಮೀರದ ಐತಿಹಾಸಿಕ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ರಾತ್ರಿ 9 ಗಂಟೆ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಏಮ್ಸ್ ಗೆ ಕರೆದೊಯ್ಯಲಾಗಿದೆ. 9:30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆ ನೀಡುವ ವಾರ್ಡ್ ಗೆ ದಾಖಲಿಸಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಪ್ರಾರಂಭಿಸಲಾಯಿತು. 
ಸುಷ್ಮಾ ಸ್ವರಾಜ್ ಅವರನ್ನು ಉಳಿಸಿಕೊಳ್ಳುವುದಕ್ಕೆ ಸತತ 70 ನಿಮಿಷಗಳ ಕಾಲ ವೈದ್ಯರು ಯತ್ನಿಸಿದರು. ಗಂಭೀರ ಸ್ಥಿತಿಯಿಂದ ಆಕೆಯನ್ನು ಪಾರುಮಾಡುವುದಕ್ಕೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನೂ ಬಳಸಲಾಯಿತಾದರೂ 10:50 ಕ್ಕೆ ಸುಷ್ಮಾ ಇಹಲೋಕ ತ್ಯಜಿಸಿದರು ಎಂದು ಏಮ್ಸ್ ಆಸ್ಪತ್ರೆ ವಕ್ತಾರರು ಹೇಳಿದ್ದಾರೆ. 
ರಾತ್ರಿ 12:15 ರ ವೇಳೆಗೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಜನ್ ಪತ್ ರಸ್ತೆಯಲ್ಲಿರುವ ಧವನ್ ದೀಪ್ ಬಿಲ್ಡಿಂಗ್ ನ ಸುಷ್ಮಾ ಅವರ ನಿವಾಸಕ್ಕೆ ರವಾನೆ ಮಾಡಲಾಯಿತು.
SCROLL FOR NEXT