ಎಲ್ ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್(ಸಂಗ್ರಹ ಚಿತ್ರ)
ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ಕೇಂದ್ರ ಸರ್ಕಾರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನದಿಂದ ಎಲ್ ಕೆ ಅಡ್ವಾಣಿ ಅವರ ಗರಡಿಯಲ್ಲಿ ಪಳಗಿದ ಡಿ 4 ನಾಯಕರ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಎಲ್ ಕೆ ಅಡ್ವಾಣಿಯವರ ಶಿಷ್ಯೆಯಾಗಿದ್ದ ಸುಷ್ಮಾ ಸ್ವರಾಜ್ ಡಿ4 ಕಂಪೆನಿಯಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರು.
ಅಂದರೆ ಡೆಲ್ಲಿ ರಾಜಕೀಯದಲ್ಲಿ ಎಲ್ ಕೆ ಅಡ್ವಾಣಿಯವರ ನಾಲ್ವರು ಪ್ರಮುಖ ಶಿಷ್ಯರು ಎಂ ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ, ಅನಂತ್ ಕುಮಾರ್ ಮತ್ತು ಸುಷ್ಮಾ ಸ್ವರಾಜ್. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಹಿನ್ನಲೆಯಲ್ಲಿ ಈಗ ಸಕ್ರಿಯ ರಾಜಕಾರಣದಲ್ಲಿಲ್ಲ. ಇನ್ನು ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿಯಾಗಿ ತಮ್ಮ ಸಾಂವಿಧಾನಿಕ ಹುದ್ದೆಯಿಂದಾಗಿ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಮಾಜಿ ಸಚಿವ ಅನಂತ್ ಕುಮಾರ್ ಕಳೆದ ವರ್ಷ ನವೆಂಬರ್ ನಲ್ಲಿ ನಿಧನರಾಗಿದ್ದರು. ಸುಷ್ಮಾ ಸ್ವರಾಜ್ ಅವರು ನಿನ್ನೆ ನಿಧನ ಹೊಂದುವ ಮೂಲಕ ಬಿಜೆಪಿ ರಾಜಕೀಯ ಪರಂಪರೆಯೊಂದು ಮುಕ್ತಾಯ ಕಂಡಿದೆ.
2009ರ ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಕಾರ್ಯತಂತ್ರ ರೂಪಿಸಿ ಯೋಜನೆ ಹಾಕಿ ಚುನಾವಣೆಗೆ ಸಜ್ಜಾಗಿ ಎಲ್ ಕೆ ಅಡ್ವಾಣಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದವರಲ್ಲಿ ಈ ನಾಲ್ವರು ನಾಯಕರ ಪಾತ್ರ ತುಂಬಾ ಮುಖ್ಯವಾಗಿತ್ತು. ಆ ಬಾರಿ ಚುನಾವಣೆಯಲ್ಲಿ ಸೋತರೂ ಕೂಡ ಈ ನಾಲ್ಕು ಜನರ ಗುಂಪು ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಪ್ರತಿಪಕ್ಷ ನಾಯಕರಾದರು.
2009ರಲ್ಲಿ ಯುಪಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಆರ್ ಎಸ್ಎಸ್ ಸಿದ್ದಾಂತಗಳನ್ನು ಹೊತ್ತ ಬಿಜೆಪಿಯಲ್ಲಿ ವಯಸ್ಸಾದ ಅಡ್ವಾಣಿಯವರನ್ನು ಮತ್ತು ಅವರ ಶಿಷ್ಯರನ್ನು ಬದಿಗಿ ಸರಿಸಿ ಬದಲಾವಣೆಗೆ ಹೊಸ ಮುಖಗಳು ಉದಯಿಸಿದವು. ನಿತಿನ್ ಗಡ್ಕರಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಮಾಡುವಲ್ಲಿ ಆರ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿತು. ಸಂಘ ಪರಿವಾರದ ಕೇಂದ್ರ ಕಚೇರಿಯನ್ನು ಹೊಂದಿರುವ ನಾಗ್ಪುರ ಮೂಲದವರು ನಿತಿನ್ ಗಡ್ಕರಿಯವರು. ಡೆಲ್ಲಿ ರಾಜಕೀಯಕ್ಕೆ ಸಂಪೂರ್ಣ ಹೊರಗಿನವರು.
ಸಂಸತ್ತಿನಲ್ಲಿ ಬಿಜೆಪಿ ಪ್ರತಿಧ್ವನಿಗಳಾಗಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಇದ್ದರೂ ಕೂಡ ಸಂಘ ಪರಿವಾರ ನಿತಿನ್ ಗಡ್ಕರಿಯವರಿಗೆ ಮಣೆ ಹಾಕಿತು. ಡೆಲ್ಲಿ ರಾಜಕೀಯದಲ್ಲಿ ಅಡ್ವಾಣಿಯವರ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಡಿ4 ಕಂಪೆನಿ ಕೂಡ ತನ್ನ ಹಿಡಿತವನ್ನು ಕಳೆದುಕೊಳ್ಳಲು ಆರಂಭಿಸಿತು.
ಆಗ ಭಾರತೀಯ ಜನತಾ ಪಾರ್ಟಿಯಿಂದ ರಾಷ್ಟ್ರ ನಾಯಕನಾಗಿ ಪ್ರತ್ಯಕ್ಷರಾದವರೇ ಗುಜರಾತ್ ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ. ಬಿಜೆಪಿಯ ಚಿತ್ರಣ ಸಂಪೂರ್ಣ ಬದಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟರು. ಅಮಿತ್ ಶಾ ಅವರನ್ನು ಬಿಜೆಪಿಯ ರಾಷ್ಟ್ರಾಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಎಲ್ ಕೆ ಅಡ್ವಾಣಿಯವರ ನಾಲ್ವರು ಶಿಷ್ಯರು ಸಂಸದೀಯ ಮಂಡಳಿಯಲ್ಲಿ ಇದ್ದರೂ ಕೂಡ ಪ್ರಮುಖ ನಿರ್ಧಾರಗಳನ್ನು ಮಾಡುವ ಅಧಿಕಾರದಿಂದ ಹಿಂದೆ ಸರಿಸಲಾಯಿತು. ಹಿಂದಿನ ಮೋದಿ ಸರ್ಕಾರದಲ್ಲಿ ಈ ನಾಲ್ವರಿಗೂ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ನೀಡಲಾಯಿತು. ಜೈಟ್ಲಿಯವರಿಗೆ ಹಣಕಾಸು ಖಾತೆ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ಖಾತೆಯಂತಹ ಪ್ರಮುಖ ಖಾತೆಗಳು ಸಿಕ್ಕವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos