ದೇಶ

ಮಹಾರಾಷ್ಟ್ರ: ಸಾಂಗ್ಲಿಯಲ್ಲಿ ರಕ್ಷಣಾ ಬೋಟ್ ಮುಳುಗಿ 9 ಸಾವು, ನಾಲ್ವರು ನಾಪತ್ತೆ

Lingaraj Badiger
ಸಾಂಗ್ಲಿ: ಮಹಾರಾಷ್ಟ್ರದ ಪ್ರವಾಹ ಪೀಡಿತ ಸಾಂಗ್ಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಬೋಟ್ ಮುಳುಗಿ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಡೆದಿದೆ.
ಭಾರೀ ಪ್ರವಾಹಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಲು ತೆರಳಿದ್ದ ಬೋಟ್ ಮುಳುಗಿದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ರಕ್ಷಣಾ ಬೋಟ್ ನಲ್ಲಿ 30ಕ್ಕೂ ಹೆಚ್ಚು ಜನರನ್ನು ಕರೆತರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪುಣೆ ವಿಭಾಗೀಯ ಆಯುಕ್ತ ದೀಪಕ್ ಮೈಸೇಕರ್ ಅವರು ಹೇಳಿದ್ದಾರೆ.
ಇದುವರೆಗೆ 9 ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಸೋಲಾಪುರ್, ಸಾಂಗ್ಲಿ, ಸತಾರಾ, ಕೊಲ್ಲಾಪುರ್ ಮತ್ತು ಪುಣೆಯಲ್ಲಿ 1.4 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬುಧವಾರ ಗೋವಾದಿಂದ ಎನ್ ಡಿಆರ್ ಎಫ್ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ನೌಕಾಪಡೆ ಸಿಬ್ಬಂದಿಗಳು ಆಗಮಿಸಿದ್ದು, ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
SCROLL FOR NEXT