ದೇಶ

ಕಾಶ್ಮೀರದಲ್ಲಿ ಎಲ್ಲವೂ ಸುಸೂತ್ರವಾಗಿದೆ, ಯಾವುದೇ ರೀತಿಯ ಪ್ರತಿಭಟನೆ ಇಲ್ಲ; ವರದಿ ತಳ್ಳಿ ಹಾಕಿದ ಗೃಹ ಸಚಿವಾಲಯ

Srinivasamurthy VN

ನವದೆಹಲಿ: ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಆರ್ಟಿಕಲ್ 370 ರದ್ಧತಿ ಬಳಿಕವೂ ರಾಜಧಾನಿ ಶ್ರೀನಗರ ಶಾಂತಿಯುತವಾಗಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.

ಆರ್ಟಿಕಲ್ 370 ರದ್ಧತಿ ಬಳಿಕ ಶ್ರೀನಗರದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಯುವಕರು ಬೀದಿಗಿಳಿದು ಕೇಂದ್ರ ಸರ್ಕಾರ ಮತ್ತು ಭಾರತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವರದಿಗಳ ಹಿನ್ನಲೆಯಲ್ಲಿ ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು,  ಕಣಿವೆ ರಾಜ್ಯ ಶಾಂತಿ ಯುತವಾಗಿದೆ. ಯಾವುದೇ ರೀತಿಯ ಕಲಹ ಅಥವಾ ಪ್ರತಿಭಟನೆ ನಡೆಸಲಾಗುತ್ತಿಲ್ಲ.  ಶ್ರೀನಗರದಲ್ಲಿ 10 ಸಾವಿರ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಜಮ್ಮು- ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು, ಈ ಕುರಿತ ಮಾಧ್ಯಮಗಳ ವರದಿ ಕಪೋಲ ಕಲ್ಪಿತ ಹಾಗೂ ಸುಳ್ಳು ಎಂದು ಹೇಳಿದೆ. ಈ ಕುರಿತಂತೆ ರಾಯಿಟರ್ಸ್ ಸುದ್ದಿ ಸಂಸ್ಥೆ ಮೊದಲು ಈ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ಪಾಕಿಸ್ತಾನದ ಡಾನ್ ದಿನ ಪತ್ರಿಕೆ ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಮಾಡಿದೆ. 

ಈ ವರದಿ ಸಂಪೂರ್ಣ ಕಪೋಲ ಕಲ್ಪಿತ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶ್ರೀನಗರ ಹಾಗೂ ಬಾರಾಮುಲ್ಲದಲ್ಲಿ ಕೆಲವು ಬೆರಳೆಣಿಕೆಯ ಜನರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗಳಲ್ಲಿ 20 ಕ್ಕೂ ಹೆಚ್ಚಿನ ಜನರು ಭಾಗವಹಿಸಿರಲಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಳೆದ ಆಗಸ್ಟ್ 6 ರಂದು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡನಾ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ 144ರ ನಿಷೇಧಾಜ್ಞೆ ವಿಧಿಸಲಾಗಿದೆ.
 

SCROLL FOR NEXT