ದೇಶ

ಕೇರಳ ಪ್ರವಾಹ: ವಯನಾಡ್ ಪುನರ್ವಸತಿ ಕೇಂದ್ರದಲ್ಲಿ ವಿಷ ಆಹಾರ ಸೇವನೆ: 30 ಮಂದಿ ಸಂತ್ರಸ್ಥರು ಅಸ್ವಸ್ಥ

Srinivasamurthy VN

ವಯನಾಡ್: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದ ನಿರಾಶ್ರಿತ ಶಿಬಿರದಲ್ಲಿ ವಿಷಾಹಾರ ಸೇವಿಸಿ 30ಕ್ಕೂ ಹೆಚ್ಚು ಮಂದಿ ಸಂತ್ರಸ್ಥರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಪ್ರವಾಹ ಪೀಡಿತ ಕೇರಳದ ವಯನಾಡ್ ಜಿಲ್ಲೆಯ ನಿರ್ವಾರಂ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ವಿಷಯುಕ್ತ ಆಹಾರ ಸೇವಿಸಿ 30  ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿರುವ ಜನರನ್ನು ಮಾನಂತವಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಲಯಾಳಂ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಇನ್ನು ಪುನವರ್ಸತಿ ಕೇಂದ್ರದಲ್ಲಿನ ವಿಷಯುಕ್ತ ಆಹಾರಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿರಾಶ್ರಿತ ಶಿಬಿರದಲ್ಲಿನ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಲಿದ್ದಾರೆ.  ಭೂಕುಸಿತ ಮತ್ತು ಮಹಾಮಳೆಗೆ ಇಲ್ಲಿಯವರೆಗೆ 76 ಮಂದಿ ಪ್ರಾಣ ಕಳೆದುಕೊಂಡಿದ್ದು ನಾಪತ್ತೆಯಾದವರ ಸಂಖ್ಯೆ 58 ಆಗಿದೆ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ. ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ವಿಡಿಯೊ ಸಂವಾದ ನಡೆಸಿ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಅರಿತುಕೊಳ್ಳುತ್ತಿದ್ದರು ಪಿಣರಾಯಿ.  ಕೇರಳದಲ್ಲಿ 1654 ಪುನರ್ವಸತಿ ಕೇಂದ್ರಗಳಿದ್ದು 2,87,585 ಮಂದಿ ಆಶ್ರಯ ಪಡೆದಿದ್ದಾರೆ.

SCROLL FOR NEXT